ಅಹಮದಾಬಾದ್: ಕೆನಡಾ-ಅಮೆರಿಕ ಗಡಿಯಲ್ಲಿ ಗುಜರಾತಿ ಕುಟುಂಬದ ನಾಲ್ವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯರೊಬ್ಬರು ಸೇರಿದಂತೆ ಇಬ್ಬರನ್ನು ಅಮೆರಿಕದ ಫೆಡೆರಲ್ ಕೋರ್ಟ್ ದೋಷಿಗಳು ಎಂದು ಘೋಷಿಸಿದೆ.
ಎರಡು ವರ್ಷಗಳ ಹಿಂದೆ ಗುಜರಾತ್ ರಾಜ್ಯದ ಗಾಂಧಿನಗರ ಜಿಲ್ಲೆಯ ಡಿಂಗುಚಾ ಗ್ರಾಮದ ಒಂದೇ ಕುಟುಂಬದ ನಾಲ್ವರು, ಅಕ್ರಮವಾಗಿ ಕೆನಡಾದಿಂದ ಅಮೆರಿಕಗೆ ಗಡಿ ದಾಟುವಾಗ ತೀವ್ರ ಚಳಿಯಿಂದಾಗಿ ಮೃತಪಟ್ಟಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಾನವ ಕಳ್ಳಸಾಗಣೆ ದಂಧೆಯಲ್ಲಿದ್ದ ಗುಜರಾತ್ ಮೂಲದ ವ್ಯಕ್ತಿ ಸೇರಿದಂತೆ ಇಬ್ಬರನ್ನು ಅಮೆರಿಕದ ಫೆಡರಲ್ ಕೋರ್ಟ್ ದೋಷಿಗಳು ಎಂದು ಘೋಷಿಸಿದೆ.
29 ವರ್ಷದ ಹರ್ಷಕುಮಾರ್ ರಮಣ್‌ಲಾಲ್ ಪಟೇಲ್, 50ರ ಸ್ಟೀವ್ ಆಂಟನಿ ಶಾಂಡ್ ಅವರೇ ದೋಷಿಗಳು. ಫೆಡೆರಲ್ ನ್ಯಾಯಾಧೀಶರು ಅಮೆರಿಕದ ಶಿಕ್ಷಾ ಮಾರ್ಗಸೂಚಿಗಳು ಮತ್ತು ಇತರ ಶಾಸನಬದ್ಧ ಅಂಶಗಳನ್ನು ಪರಿಗಣಿಸಿದ ಬಳಿಕ ಎಂತಹ ಶಿಕ್ಷೆ ವಿಧಿಸಬೇಕು ಎಂದು ನಿರ್ಧರಿಸಲಿದ್ದಾರೆ ಎಂದು ಸಾರ್ವಜನಿಕ ವ್ಯವಹಾರಗಳ ಅಮೆರಿಕದ ನ್ಯಾಯಾಲಯ ಕಚೇರಿ ಪ್ರಕಟಣೆ ತಿಳಿಸಿದೆ.
'ಪಟೇಲ್ ಹಾಗೂ ಶಾಂಡ್ ಅವರು ಭಾರತೀಯ ಪ್ರಜೆಗಳನ್ನು ವಿದ್ಯಾರ್ಥಿ ವೀಸಾ ಮೇಲೆ ಕೆನಡಾಕ್ಕೆ ಕರೆತಂದು, ಬಳಿಕ ಅಮೆರಿಕಗೆ ಕಳ್ಳಸಾಗಣೆ ಮಾಡುತ್ತಿದ್ದರು' ಎಂದು ಪ್ರಕಟಣೆ ತಿಳಿಸಿದೆ.
ಗಡಿ ದಾಟುವಾಗ ಮೃತಪಟ್ಟ ಡಿಂಗುಚಾ ಗ್ರಾಮದವರನ್ನು ಜಗದೀಶ್ ಪಟೇಲ್ (39), ಪತ್ನಿ ವೈಶಾಲಿಬೆನ್ ಪಟೇಲ್ (37), ಮಕ್ಕಳಾದ ವಿಹಾಂಗಿ ಪಟೇಲ್ (11) ಮತ್ತು ಧಾರ್ಮಿಕ್ ಪಟೇಲ್ (3) ಎಂದು ಗುರುತಿಸಲಾಗಿದೆ.
ಗುಜರಾತ್ ಪೊಲೀಸರ ತನಿಖೆ: ಅಹಮದಾಬಾದ್‌ನ ಅಪರಾಧ ಪತ್ತೆ ವಿಭಾಗವು (DCB) ಮೂವರು ಶಂಕಿತ ಮಾನವ ಕಳ್ಳಸಾಗಣೆದಾರರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದೆ. ಭವೇಶ್ ಪಟೇಲ್, ದಶರಥ್ ಪ್ರತಾಪ್ ಚೌಧರಿ, ಕುಡಸನ್ ಮತ್ತು ಯೋಗೇಶ್ ಪಟೇಲ್ ಎಂಬುವವರು 11 ಗುಜರಾತಿಗಳ ತಂಡವನ್ನು ಕೆನಡಾ ಗಡಿ ಮೂಲಕ ಅಮೆರಿಕಗೆ ಕಳ್ಳಸಾಗಣೆ ಮಾಡಿದ ಆರೋಪವನ್ನು ಆರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ.