ಕುಂಬಳೆ: ಧರ್ತಿ ಅಭಾ ಜಂಜಾಟಿಯ ಗ್ರಾಮ ಉತ್ಕರ್ಷ ಅಭಿಯಾನ (ಡಿಎಂ-ಜೆಜಿಯುಎ) ಯೋಜನೆಯ ಜಿಲ್ಲಾ ಮಟ್ಟದ ಕಾರ್ಯಕ್ರಮ ಕುಂಬಳೆ ಮಾವಿನಕಟ್ಟೆ ಉನ್ನತಿ(ಕಾಲನಿ)ಯಲ್ಲಿ ಶುಕ್ರವಾರ ನಡೆಯಿತು. ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಆನ್‍ಲೈನ್‍ನಲ್ಲಿ ಉದ್ಘಾಟಿಸಿದರು. ಸಮಾರಂಭವನ್ನು ಉನ್ನತಿಯಲ್ಲಿ ನೇರ ಪ್ರಸಾರ ಮಾಡಲಾಯಿತು.
ಮಾವಿನಕಟ್ಟೆ ಉನ್ನತಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್ ವಹಿಸಿದ್ದರು. ಎಡಿಎಂ ಪಿ.ಅಖಿಲ್, ಕಾಸರಗೋಡು ಜಿಲ್ಲಾ ಪಂಚಾಯತಿ ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಶಕುಂತಲಾ ಮುಖ್ಯ ಅತಿಥಿಗಳಾಗಿದ್ದರು. ಕುಂಬಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಕುಂಬಳೆ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಸಾಬೂರ, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎ.ರಹ್ಮಾನ್ ಆರಿಕ್ಕಾಡಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪಿ.ಎಂ.ನಸೀಮಾ, ಸದಸ್ಯರಾದ ಪ್ರೇಮಲತಾ, ಮೋಹನ, ಅನಿಲ್ ಕುಮಾರ್.ಎಸ್, ಕುಂಬಳೆ ಗ್ರಾಮ ಪಂಚಾಯತಿ ಕಾರ್ಯದರ್ಶಿ ವೀರಜ್ ತಂಬುರಾನ್ ಮತ್ತು ಕಿರ್ತಾಡ್ಸ್ ಕಾರ್ಟೋಗ್ರಾಫರ್ ರಶ್ಮಿಪ್ರಭಾ ಮಾತನಾಡಿದರು. ಕಾಸರಗೋಡು ಗಿರಿಜನ ಅಭಿವೃದ್ಧಿ ಅಧಿಕಾರಿ ಕೆ.ಕೆ.ಮೋಹನ್ ದಾಸ್ ಸ್ವಾಗತಿಸಿ, ಎಣ್ಮಕಜೆ ಗಿರಿಜನ ವಿಸ್ತರಣಾಧಿಕಾರಿ ಕೆ. ವೀಣಾ ನಾರಾಯಣ ವಂದಿಸಿದರು.
ಪ್ರಧಾನಮಂತ್ರಿ ಜನ್ಮನ್ ಯೋಜನೆಯ ಅಂಗವಾಗಿ ಉನ್ನತಿಯಲ್ಲಿ ಆಯೋಜಿಸಿದ್ದ ಐಇಸಿ ಶಿಬಿರದ ಅಂಗವಾಗಿ ತೆಗೆದ ಆಧಾರ್ ಕಾರ್ಡ್ ಮತ್ತು ಆಯುಷ್ಮಾನ್ ಭಾರತ್ ಕಾರ್ಡ್ ಅನ್ನು ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್ ಹಾಗೂ ಎಡಿಎಂ ಪಿ.ಅಖಿಲ್ ವಿತರಿಸಿದರು. ಕೊರಗ ಸಮುದಾಯದ ವಿಶಿಷ್ಟ ನೃತ್ಯವಾದ ಕೊರಗ ನೃತ್ಯ ಪ್ರದರ್ಶಿನಗೊಂಡಿತು.
ಜಂಜಾಟಿಯ ಗೌರವ ದಿವಸ್ ಅಂಗವಾಗಿ ಜಿಲ್ಲಾ ಅಕ್ಷಯ ಕೇಂದ್ರದ ಸಹಯೋಗದಲ್ಲಿ ಆಧಾರ್ ನವೀಕರಣ ಶಿಬಿರ ಮತ್ತು ಆಧಾರ್ ಅರ್ಹತಾ ಶಿಬಿರವನ್ನು ಉನ್ನತಿಯಯಲ್ಲಿ ಆಯೋಜಿಸಲಾಗಿತ್ತು. ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆಯ ಸಂಚಾರಿ ವೈದ್ಯಕೀಯ ಘಟಕದ ನೇತೃತ್ವದಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನೂ ಆಯೋಜಿಸಲಾಗಿತ್ತು. ಶಿಬಿರದಲ್ಲಿ 47 ಮಂದಿಗೆ ಆಧಾರ್ ಸೇವೆ, ನಾಲ್ವರಿಗೆ ಚುನಾವಣಾ ಗುರುತಿನ ಚೀಟಿ ಸಂಬಂಧಿತ ಸೇವೆ ಹಾಗೂ ಇಬ್ಬರಿಗೆ ಪಡಿತರ ಚೀಟಿ ಸಂಬಂಧಿತ ಸೇವೆಗಳನ್ನು ಒದಗಿಸಲಾಯಿತು.