ನವದೆಹಲಿ: ಸಂವಿಧಾನದ ಪೀಠಿಕೆಯಲ್ಲಿ 'ಸಮಾಜವಾದಿ', 'ಜಾತ್ಯತೀತ' ಮತ್ತು 'ಸಮಗ್ರತೆ' ಎಂಬ ಪದಗಳನ್ನು ಸೇರಿಸಿದ್ದ 1976ರ ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
1976ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿಯ ವೇಳೆ 42ನೇ ತಿದ್ದುಪಡಿಯ ಮೂಲಕ ಭಾರತದ ಸಂವಿಧಾನದ ಪೀಠಿಕೆಯಲ್ಲಿ 'ಜಾತ್ಯತೀತ' ಮತ್ತು 'ಸಮಾಜವಾದಿ' ಪದವನ್ನು ಸೇರಿಸಿದ್ದರು.
'ಜಾತ್ಯತೀತ' ಮತ್ತು 'ಸಮಾಜವಾದಿ' ಪದಗಳ ಸೇರ್ಪಡೆಯನ್ನು ಪ್ರಶ್ನಿಸಿ ರಾಜ್ಯಸಭೆಯ ಮಾಜಿ ಸದಸ್ಯ, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ವಕೀಲ ವಿಷ್ಣು ಶಂಕರ್ ಜೈನ್ ಮತ್ತು ಇತರರು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರ ಪೀಠವು ನವೆಂಬರ್ 22 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ಈ ಅರ್ಜಿಗಳಿಗೆ ವಿವರವಾದ ವಿಚಾರಣೆಯ ಅಗತ್ಯವಿಲ್ಲ ಎಂದು ಸಿಜೆಐ ಖನ್ನಾ ನೇತೃತ್ವದ ಪೀಠ ಹೇಳಿದೆ.
'ಸಮಾಜವಾದಿ' ಮತ್ತು 'ಜಾತ್ಯತೀತ' ಎಂಬ ಎರಡು ಅಭಿವ್ಯಕ್ತಿಗಳನ್ನು 1976 ರಲ್ಲಿ ತಿದ್ದುಪಡಿಗಳ ಮೂಲಕ ಸೇರಿಸಿದ್ದು, ಸಂವಿಧಾನವನ್ನು 1949 ರಲ್ಲಿ ಅಂಗೀಕರಿಸಿರುವ ಅಂಶಗಳು ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ. ಮರುಪರಿಶೀಲನೆಯ ವಾದಗಳನ್ನು ಒಪ್ಪಿಕೊಂಡರೆ ಅದು ಎಲ್ಲಾ ತಿದ್ದುಪಡಿಗಳಿಗೆ ಅನ್ವಯಿಸುವಂತಾಗುತ್ತದೆ" ಎಂದು ಸಿಜೆಐ ಹೇಳಿದ್ದಾರೆ.