ಭುವನೇಶ್ವರ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ನಿರಂತರವಾಗಿ ಅಪಪ್ರಚಾರದಲ್ಲಿ ತೊಡಗಿವೆ ಎಂದು ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭುವನೇಶ್ವರದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಪ್ರತಿಪಕ್ಷಗಳಿಗೆ ಒಂದೇ ಒಂದು ಗುರಿಯಿದೆ.
ಜನರನ್ನು ದಾರಿ ತಪ್ಪಿಸುವ ಮೂಲಕ ಹೇಗಾದರೂ ಅಧಿಕಾರವನ್ನು ಹಿಡಿಯುವುದಾಗಿದೆ' ಎಂದು ಹೇಳಿದ್ದಾರೆ.
'ಅಧಿಕಾರವನ್ನು ತಮ್ಮ ಜನ್ಮಸಿದ್ಧ ಹಕ್ಕು ಎಂದು ಪರಿಗಣಿಸುವವರು ಕಳೆದ ಒಂದು ದಶಕದಿಂದ ಕೇಂದ್ರದಲ್ಲಿ ಅಧಿಕಾರದಲ್ಲಿಲ್ಲ' ಎಂದು ಮೋದಿ ಟೀಕಿಸಿದ್ದಾರೆ.
'ಒಡಿಶಾ ಚುನಾವಣಾ ಫಲಿತಾಂಶವು ಅನೇಕ ರಾಜಕೀಯ ತಜ್ಞರನ್ನು ಆಶ್ಚರ್ಯಗೊಳಿಸಿದೆ. ಒಡಿಶಾ, ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿಯ ಚುನಾವಣಾ ಯಶಸ್ಸು ನಮ್ಮ ಪಕ್ಷದ ಕಾರ್ಯಕರ್ತರ ಶಕ್ತಿಯನ್ನು ತೋರಿಸುತ್ತದೆ' ಎಂದು ಮೋದಿ ಪ್ರತಿಪಾದಿಸಿದ್ದಾರೆ.