ತಿರುವನಂತಪುರಂ: ಗಂಭೀರ ಸಮಸ್ಯೆಗಳೊಂದಿಗೆ ಶಿಶು ಜನಿಸಿರುವುದಕ್ಕೆ ಸಂಬಂಧಪಟ್ಟಂತೆ ಕೇರಳ ಅಲಪ್ಪಳದ ನಾಲ್ವರು ವೈದ್ಯರ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಸರ್ಕಾರ ತನಿಖೆಗೆ ಆದೇಶಿಸಿದೆ.
ನವೆಂಬರ್ 2ರಂದು ಜನಿಸಿದ ಮಗುವಿಗೆ ಹಲವು ರೀತಿಯ ಗಂಭೀರ ಸಮಸ್ಯೆಗಳಿವೆ. ಇದಕ್ಕೆ ಕಾರಣ ಸರ್ಕಾರಿ ವೈದ್ಯರು ಮತ್ತು ಎರಡು ಸ್ಕ್ಯಾನಿಂಗ್ ಸೆಂಟರ್‌ಗಳ ನಿರ್ಲಕ್ಷ್ಯ ಎಂದು ಮಗುವಿನ ಪೋಷಕರಾದ ಸುರುಮಿ ಮತ್ತು ಅನೀಶ್ ದಂಪತಿ ಆರೋಪಿಸಿದ್ದಾರೆ.
ಸುರುಮಿಯ ಗರ್ಭಾವಸ್ಥೆಯಲ್ಲಿ ಅನೇಕ ಅಲ್ಟ್ರಾಸೌಂಡ್‌ಗಳನ್ನು ನಡೆಸಿದರೂ ಭ್ರೂಣದ ಅಸಹಜತೆಗಳನ್ನು ಪತ್ತೆಹಚ್ಚಲು ವೈದ್ಯರು ಮತ್ತು ಸ್ಕ್ಯಾನಿಂಗ್ ಕೇಂದ್ರದವರು ವಿಫಲರಾಗಿದ್ದಾರೆ ಎಂದು ದಂಪತಿ ದೂರಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರಿಗೆ ದೂರು ನೀಡಿದ್ದಾರೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಆರೋಗ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕರಿಂದ ವರದಿ ಕೇಳಿದೆ. ಪ್ರಕರಣ ಕುರಿತು ಆಲಪ್ಪುಝ ದಕ್ಷಿಣ ಪೊಲೀಸ್ ಠಾಣೆಯ ಅಧಿಕಾರಿ ಕೆ ಶ್ರೀಜಿತ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಪೊಲೀಸ್ ವರಿಷ್ಠಾಧಿಕಾರಿ ಎಂ ಆರ್ ಮಧುಬಾಬು ತನಿಖೆಯ ಮೇಲ್ವಿಚಾರಣೆ ನಡೆಸಲಿದ್ದಾರೆ.
ಸುರುಮಿ ಅವರು ಗರ್ಭಾವಸ್ಥೆಯಲ್ಲಿ ಅಲಪ್ಪುಝ ಕಡ್ಡಪ್ಪುರ (ಬೀಚ್) ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ (ಡಬ್ಲ್ಯುಎಸಿ ಆಸ್ಪತ್ರೆ) ಇಬ್ಬರು ಹಿರಿಯ ವೈದ್ಯರ ಆರೈಕೆಯಲ್ಲಿದ್ದರು ಮತ್ತು ಏಳು ಸ್ಕ್ಯಾನ್‌ಗಳಿಗೆ ಒಳಗಾಗಿದ್ದರು. ಆದರೆ, ಈ ಸ್ಕ್ಯಾನ್‌ಗಳು ಗಮನಾರ್ಹವಾದ ಭ್ರೂಣದ ಅಸಹಜತೆಗಳನ್ನು ಪತ್ತೆ ಹಚ್ಚಲು ವಿಫಲವಾಗಿವೆ.
ನವೆಂಬರ್ 2 ರಂದು ಮಗು ಜನಿಸಿದಾಗ, ಅದರ ಮುಖದಲ್ಲಿ ಅಸಹಜತೆಗಳು, ಹೃದಯ ದೋಷ, ಕಾರ್ಯನಿರ್ವಹಿಸದ ಹಾಗೂ ತಪ್ಪಾಗಿ ಜೋಡಿಸಲಾದ ಕಣ್ಣುಗಳು ಮತ್ತು ಕಿವಿಗಳು, ಅಂಗ ವಿರೂಪಗಳು ಮತ್ತು ಬಾಯಿ ತೆರೆಯಲು ಆಗದಿರುವುದು ಸೇರಿದಂತೆ ಗಂಭೀರ ಸಮಸ್ಯೆಗಳು ಕಂಡು ಬಂದಿವೆ.
“ಹೆರಿಗೆಗಾಗಿ ಅಕ್ಟೋಬರ್ 30 ರಂದು ಡಬ್ಲ್ಯುಎಸಿ ಆಸ್ಪತ್ರೆಗೆ ದಾಖಲಾಗಿದ್ದೆ. ಅಲ್ಲಿ ತೊಡಕುಗಳ ಕಾರಣ ಅಲಪ್ಪುಝ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (ಎಂಸಿಹೆಚ್) ವರ್ಗಾಯಿಸಲಾಗಿತ್ತು. ಎಂಸಿಹೆಚ್‌ನ ವೈದ್ಯರು ಮಗುವಿಗೆ ಸಮಸ್ಯೆಗಳು ಇರುವುದನ್ನು ತಕ್ಷಣ ಪತ್ತೆ ಹಚ್ಚಿದ್ದಾರೆ. ಈ ಹಿಂದಿನ ಸ್ಕ್ಯಾನ್‌ಗಳ ಸಾಮರ್ಥ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ” ಎಂದು ಸುರುಮಿ ಹೇಳಿದ್ದಾರೆ.
“ಭ್ರೂಣ ಸಮಸ್ಯೆಯಿಂದ ಕೂಡಿರುವುದು ಸ್ಕ್ಯಾನಿಂಗ್ ವೇಳೆ ಪತ್ತೆ ಮಾಡಿದ್ದರೆ, ಗರ್ಭಧಾರಣೆಯನ್ನು ಕೊನೆಗೊಳಿಸುವ ಒಂದು ಆಯ್ಕೆ ಇತ್ತು. ನನ್ನ ನಿಗದಿತ ಸ್ಕ್ಯಾನಿಂಗ್ ಸಮಯಗಳಲ್ಲಿ ವೈದ್ಯರು ಯಾವಾಗಲೂ ಇರುತ್ತಿರಲಿಲ್ಲ” ಎಂದು ಸುರುಮಿ ಆರೋಪಿಸಿದ್ದಾರೆ.
ಡಬ್ಲ್ಯುಎಸಿ ಆಸ್ಪತ್ರೆಯ ವೈದ್ಯರು ಮತ್ತು ಸ್ಕ್ಯಾನಿಂಗ್ ಸೆಂಟರ್‌ಗಳು ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ದಂಪತಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಮುಖ್ಯಸ್ಥರಿಗೂ ದೂರು ನೀಡಿದ್ದಾರೆ. ಪ್ರಸ್ತುತ ಈ ಪ್ರಕರಣ ಕೇರಳದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿದೆ.