ನವದೆಹಲಿ: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬರನ್ನು ಮದುವೆಯಾಗಲು ಮಹಿಳೆಯೊಬ್ಬರು ತನ್ನ ಐದು ವರ್ಷದ ಮಗಳನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಪ್ರಕರಣ ವಾಯವ್ಯ ದೆಹಲಿಯಲ್ಲಿ ನಡೆದಿದೆ.
'ಸಂಬಂಧಿಕರ ಜೊತೆ ಮಹಿಳೆಯು ಹಿಮಾಚಲ ಪ್ರದೇಶದಲ್ಲಿ ನೆಲಸಿದ್ದರು.
ನಂತರ, ದೆಹಲಿಗೆ ವಾಸಸ್ಥಳವನ್ನು ಬದಲಾಯಿಸಿದ್ದರು' ಎಂದು ಪೊಲೀಸರು ತಿಳಿಸಿದರು.
'ಆಸ್ಪತ್ರೆಗೆ ಕರೆತರುವ ವೇಳೆಯೇ ಮಗು ಮೃತಪಟ್ಟಿದೆ ಎಂದು ದೀಪ್‌ಚಂದ್ ಬಂಧು ಆಸ್ಪತ್ರೆಯ ಸಿಬ್ಬಂದಿಯು ಶುಕ್ರವಾರ ಪೊಲೀಸರಿಗೆ ತಿಳಿಸಿದ್ದರು. ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸರು, ಮಗುವಿನ ಮೃತದೇಹ ಪರಿಶೀಲಿಸಿದ ವೇಳೆ ಕತ್ತಿನ ಭಾಗದಲ್ಲಿ ಗಾಯದ ಕಲೆಗಳಿದ್ದವು. ತಕ್ಷಣವೇ ಪ್ರಕರಣ ದಾಖಲಿಸಿ, ತಾಯಿ ಹಾಗೂ ಸಂಬಂಧಿಕರನ್ನು ವಿಚಾರಣೆಗೆ ಒಳಪಡಿಸಲಾಯಿತು. ಆ ವೇಳೆ ತಾನೇ ಮಗಳನ್ನು ಕೊಂದಿರುವುದಾಗಿ ತಾಯಿ ತಪ್ಪೊಪ್ಪಿಕೊಂಡರು' ಎಂದು ಪೊಲೀಸರು ತಿಳಿಸಿದರು.
ಮಹಿಳೆಯ ಮೊದಲ ಪತಿ ಹಲವು ವರ್ಷಗಳ ಹಿಂದೆಯೇ ತ್ಯಜಿಸಿದ್ದರು. ಇದಾದ ಬಳಿಕ ಇನ್‌ಸ್ಟಾಗ್ರಾಂನಲ್ಲಿ ರಾಹುಲ್‌ನ ಪರಿಚಯವಾಗಿತ್ತು. ಆತನ ಮದುವೆಯಾಗುವ ಉದ್ದೇಶದಿಂದಲೇ ದೆಹಲಿಗೆ ಬಂದಿದ್ದರು. ಆದರೆ, ಮಗು ಹೊಂದಿದ ಮಹಿಳೆಯನ್ನು ಮದುವೆಯಾಗಲು ರಾಹುಲ್ ನಿರಾಕರಿಸಿದ್ದ. ಇದರಿಂದ ಹತಾಶೆಗೊಳಗಾದ ಮಹಿಳೆಯು ಮಗಳನ್ನೇ ಕೊಂದು ಹಾಕಿದ್ದಾರೆ' ಎಂದು ವಿವರಿಸಿದರು.
ಮಹಿಳೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.