ಮುಂಬೈ: ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಿವಕುಮಾರ್ ಗೌತಮ್‌ನ ಪೊಲೀಸ್ ಕಸ್ಟಡಿ ಅವಧಿಯನ್ನು ನವೆಂಬರ್ 23ರವರೆಗೆ ವಿಸ್ತರಿಸಿ ಮುಂಬೈ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.
ಗುಂಡಿನ ದಾಳಿಗೆ ಬಳಸಿದ ಆಯುಧ ಇನ್ನೂ ಪತ್ತೆಯಾಗಿಲ್ಲ. ಅಲ್ಲದೇ ಶಿವಕುಮಾರ್ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿರುವ ಪೊಲೀಸರು ಆತನನ್ನು ಮತ್ತಷ್ಟು ದಿನಗಳ ಕಾಲ ಕಸ್ಟಡಿಗೆ ಕೋರಿದ್ದರು.
ಎಲ್ಲಾ ಆರೋಪಿಗಳನ್ನು ಇಂದು ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ವಿನೋದ್ ಪಾಟೀಲ ಅವರ ಮುಂದೆ ಹಾಜರುಪಡಿಸಲಾಗಿತ್ತು.
ನ್ಯಾಯಾಲಯವು ಶಿವಕುಮಾರ್‌ನ ಪೊಲೀಸ್ ಕಸ್ಟಡಿಯನ್ನು ನವೆಂಬರ್ 23ರವರೆಗೆ ವಿಸ್ತರಿಸಿ ಆದೇಶಿಸಿದೆ. ಉಳಿದ ಇತರ ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಿದ್ದೀಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನವೆಂಬರ್ 10 ರಂದು ಜಂಟಿ ಕಾರ್ಯಾಚರಣೆ ನಡೆಸಿದ ಉತ್ತರ ಪ್ರದೇಶದ ಎಸ್‌ಟಿಎಫ್ ಹಾಗೂ ಮುಂಬೈ ಕ್ರೈಂ ಬ್ರ್ಯಾಂಚ್ ಸಿಬ್ಬಂದಿ ಉತ್ತರ ಪ್ರದೇಶದ ಬಹರಾಯಿಚ್ ಜಿಲ್ಲೆ ನಾನ್ಪಾರಾದಲ್ಲಿ ಪ್ರಮುಖ ಶೂಟರ್ ಶಿವಕುಮಾರ್ ಹಾಗೂ ಇತರ ನಾಲ್ವರನ್ನು ಬಂಧಿಸಿದ್ದರು.
ಅನುರಾಗ್ ಕಶ್ಯಪ್, ಜ್ಞಾನಪ್ರಕಾಶ ತ್ರಿಪಾಠಿ, ಆಕಾಶ್ ಶ್ರೀವಾಸ್ತವ ಹಾಗೂ ಅಖಿಲೇಂದ್ರ ಪ್ರತಾಪ್ ಸಿಂಗ್ ಬಂಧಿತ ಇತರರು. ಈ ನಾಲ್ವರು ಶಿವಕುಮಾರ್‌ಗೆ ಆಶ್ರಯ ನೀಡಿದ್ದರು. ಅಲ್ಲದೇ ನೇಪಾಳಕ್ಕೆ ಪರಾರಿಯಾಗಲು ಯತ್ನಿಸಿದ್ದ ಆತನಿಗೆ ನೆರವು ನೀಡಿದ್ದರು ಎಂದು ಆರೋಪಿಸಲಾಗಿದೆ.
ಅಕ್ಟೋಬರ್ 12ರಂದು ಮುಂಬೈನ ಬಾಂದ್ರಾ ಪ್ರದೇಶದ ನಿರ್ಮಲ್ ನಗರದಲ್ಲಿರುವ ಶಾಸಕ ಜೀಶನ್ ಸಿದ್ದೀಕಿ ಅವರ ಕಚೇರಿ ಬಳಿ ಬಾಬಾ ಸಿದ್ದೀಕಿ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.