ಕಾಸರಗೋಡು: ಕನ್ನಡವನ್ನು ಕಟ್ಟುವ ಹತ್ಯಾರಗಳು ಗಡಿನಾಡಿನಿಂದಲೇ ಹೆಚ್ಚಾಗಿ ಬಂದಿವೆ. ಇದಕ್ಕೆ ಇಲ್ಲಿಯ ಸಂದಿಗ್ಧತೆಗಳು ಕಾರಣ ಎಂದು ಪೆರಿಯ ಕೇಂದ್ರೀಯ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಚೇತನ್ ಮುಂಡಾಜೆ ಅಭಿಪ್ರಾಯಪಟ್ಟರು.
ಇಲ್ಲಿಯ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾಯ್ರ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಭಾಷಾವಾಚಿಯಾಗಿಯೂ ಪ್ರದೇಶವಾಚಿಯಾಗಿಯೂ ಕನ್ನಡವನ್ನು ನಾವು ಗುರುತಿಸಬಹುದು. ಕರ್ನಾಟಕದ ಹೊರಗಿದ್ದು ಕನ್ನಡ ರಾಜ್ಯೋತ್ಸವ ಆಚರಿಸುವುದು ಬಹಳ ಪ್ರಾಮುಖ್ಯತೆ ಹೊಂದಿದೆ ಎಂದು ನುಡಿದರು.
ಗಡಿನಾಡನಲ್ಲಿದ್ದರೂ, ಹೊರರಾಜ್ಯದಲ್ಲಿದ್ದರೂ ಕನ್ನಡದ ಅಸ್ಮಿತೆಯನ್ನು ಕಾಪಾಡಿಕೊಳ್ಳಬೇಕು. ಭಾರತಾಂತರ್ಗತ ಕರ್ನಾಟಕ ಅನ್ನುವ ದೃಷ್ಟಿ ನಾಡಗೀತೆಯಲ್ಲಿ ಇದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಭಾಗದ ಪ್ರಭಾರಿ ಡಾ. ಪ್ರವೀಣ ಪದ್ಯಾಣ ಹೇಳಿದರು. ವೇದಿಕೆಯ ಮೇಲೆ ಸಂಶೋಧನಾರ್ಥಿ ಶಶಾಂಕ ಹೆಚ್ ವಿ, ದ್ವಿತೀಯ ಸ್ನಾತಕೋತ್ತರ ವಿದ್ಯಾರ್ಥಿ ವಿನಯ ಎಂ ಹಾಗೂ ಪ್ರಥಮ ಸ್ನಾತಕೋತ್ತರ ವಿದ್ಯಾರ್ಥಿನಿ ಚೇತನಾ ಕೆ ಉಪಸ್ಥಿತರಿದ್ದರು. ವಿವಿಧ ಕನ್ನಡಪರ ಗೀತೆಗಳ ಗಾಯನವನ್ನು ವಿಭಾಗದ ವಿವಿಧ ವಿದ್ಯಾರ್ಥಿ ತಂಡಗಳು ನಡೆಸಿಕೊಟ್ಟವು. ಸಂಶೋಧನಾರ್ಥಿ ಸೋಮ ನಿಂಗ ಹಿಪ್ಪರಗಿ ಸ್ವಾಗತಿಸಿ, ನಿರೂಪಿಸಿದರು. ವಿನಯ ಎಂ ವಂದಿಸಿದರು.