ಕತ್ರಾ: ಜಮ್ಮು-ಕಾಶ್ಮೀರದ ಕತ್ರಾದಲ್ಲಿ ಮಾತಾ ವೈಷ್ಣೋ ದೇವಿ ರೋಪ್ ವೇ ಯೋಜನೆ ವಿರೋಧಿಸಿ ಸ್ಥಳೀಯ ವ್ಯಾಪಾರಿಗಳು ಸೋಮವಾರ ಭಾರಿ ಪ್ರತಿಭಟನೆ ನಡೆಸಿದ್ದು, ಕಲ್ಲು ತೂರಾಟದಂತಹ ಘಟನೆಗಳು ನಡೆದಿವೆ.
ಪೊಲೀಸರೊಂದಿಗೆ ಸಂಘರ್ಷಕ್ಕಿಳಿದ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದು, ಮಾತಾ ವೈಷ್ಣೋ ದೇವಿ ರೋಪ್ ವೇ ಯೋಜನೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ರೋಪ್ ವೇ ಯೋಜನೆ ವಿರೋಧಿಸಿ ಸ್ಥಳೀಯ ವರ್ತಕರು ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. ಇಂದು ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಸೇನಾ ಟ್ರಕ್ ಮೇಲೂ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಸ್ಥಳೀಯ ಪೊಲೀಸರು ಹಾಗೂ ಸಿಆರ್ ಪಿಎಫ್ ಸಿಬ್ಬಂದಿ ಪ್ರಯತ್ನಿಸಿದ್ದಾರೆ.
ರೋಪ್ ವೇ ಯೋಜನೆ ತಮ್ಮ ಬದುಕನ್ನು ಕಿತ್ತುಕೊಳ್ಳಲಿದ್ದು, ಆ ಯೋಜನೆಯನ್ನು ರದ್ದುಪಡಿಸಬೇಕು, ಇಲ್ಲದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ ಸರ್ಕಾರ ಇಲ್ಲಿ ಉದ್ಯೋಗಾವಕಾಶ ಹೆಚ್ಚಿಸಲು ಬಯಸಿದೆ. ಪ್ರತಿಭಟನಾಕಾರರ ಅಹವಾಲನ್ನು ಆಲಿಸಲಾಗುವುದು ಎಂದು ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ ಹೇಳಿದ್ದಾರೆ.