ನವದೆಹಲಿ: ಸಂಭಲ್ ಜಿಲ್ಲೆಯ ಚಂದೌಸಿಯಲ್ಲಿನ ಶಾಹಿ ಜಾಮಾ ಮಸೀದಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.
ಅಲ್ಲದೇ, ಹಿಂಸಾಚಾರ ಪೀಡಿತ ಚಂದೌಸಿ ಪಟ್ಟಣದಲ್ಲಿ ಶಾಂತಿ ಹಾಗೂ ಸೌಹಾರ್ದ ಕಾಪಾಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೂ ನಿರ್ದೇಶನ ನೀಡಿದೆ.
ಮಸೀದಿಯಲ್ಲಿ ಸಮೀಕ್ಷೆ ನಡೆಸುವ ಕುರಿತು ಸಂಭಲ್‌ನ ವಿಚಾರಣಾ ನ್ಯಾಯಾಲಯ ನೀಡಿರುವ ಆದೇಶ ಪ್ರಶ್ನಿಸಿ ಶಾಹಿ ಜಾಮಾ ಮಸೀದಿ ಸಮಿತಿ ಸಲ್ಲಿಸಿರುವ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್‌ನಲ್ಲಿ, ಮೂರು ಕಚೇರಿ ಕೆಲಸದ ದಿನಗಳಲ್ಲಿ ವಿಚಾರಣೆ ಪಟ್ಟಿಗೆ ಸೇರಿಸುವಂತೆಯೂ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿ ಸಂಜಯಕುಮಾರ್ ಅವರು ಇದ್ದ ಪೀಠವು, ಅರ್ಜಿ ವಿಚಾರಣೆ ನಡೆಸಿತು.
'ಕೋರ್ಟ್ ನೇಮಕ ಮಾಡಿರುವ ಕಮಿಷನರ್, ಮಸೀದಿ ಸಮೀಕ್ಷೆಗೆ ಸಂಬಂಧಿಸಿದ ವರದಿಯನ್ನು ಮೊಹರು ಹಾಕಿ ಇಡಬೇಕು ಹಾಗೂ ಮುಂದಿನ ಆದೇಶದವರೆಗೆ ತೆರೆಯಬಾರದು ಎಂದು ಪೀಠ ಸೂಚಿಸಿದೆ.
'ಅರ್ಜಿದಾರರು (ಮಸೀದಿ ಸಮಿತಿ) ಮಸೀದಿ ಸಮೀಕ್ಷೆ ಕುರಿತಂತೆ ನವೆಂಬರ್ 19ರಂದು ವಿಚಾರಣಾ ನ್ಯಾಯಾಲಯ ನೀಡಿರುವ ಆದೇಶವನ್ನು ಸೂಕ್ತ ವೇದಿಕೆಯಲ್ಲಿ ಪ್ರಶ್ನಿಸಬೇಕು. ಇದೇ ವೇಳೆ, ಶಾಂತಿ ಮತ್ತು ಸೌಹಾರ್ದವನ್ನೂ ಕಾಪಾಡಬೇಕು' ಎಂದು ಸಿಜೆಐ ಆದೇಶದಲ್ಲಿ ಸೂಚಿಸಿದ್ದಾರೆ.
ವಿಚಾರಣೆ ವೇಳೆ, 'ಅರ್ಜಿಯನ್ನು ಸಂಭಲ್‌ನ ನ್ಯಾಯಾಲಯ ಜನವರಿ 8ಕ್ಕೆ ವಿಚಾರಣಾ ಪಟ್ಟಿಗೆ ಸೇರಿಸಿದೆ' ಎಂಬುದನ್ನು ಪೀಠದ ಗಮನಕ್ಕೆ ತರಲಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, 'ಈ ಪ್ರಕರಣವನ್ನು ಹೈಕೋರ್ಟ್‌ನಲ್ಲಿ ಪಟ್ಟಿಗೆ ಸೇರಿಸುವವರೆಗೆ ವಿಚಾರಣಾ ನ್ಯಾಯಾಲಯ ಅರ್ಜಿ ವಿಚಾರಣೆ ಮುಂದುವರಿಸುವುದಿಲ್ಲ ಎಂಬ ಭರವಸೆ ನಮಗಿದೆ' ಎಂದರು.
'ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ರಜಾಕಾಲದ ವಿಶೇಷ ಮೇಲ್ಮನವಿಯನ್ನು (ಎಸ್‌ಎಲ್‌ಪಿ) ನಾವು ವಿಲೇವಾರಿ ಮಾಡುವುದಿಲ್ಲ. ಜ.8ರ ನಂತರ ಈ ಅರ್ಜಿಯನ್ನು ವಿಚಾರಣಾ ಪಟ್ಟಿಗೆ ಸೇರಿಸಲಾಗುವುದು' ಎಂದೂ ಸ್ಪಷ್ಟಪಡಿಸಿದರು.
ಮಸೀದಿಯನ್ನು ಹರಿಹರ ಮಂದಿರದ ಮೇಲೆ ನಿರ್ಮಿಸಲಾಗಿದೆ ಎಂದು ದೂರಿ ವಕೀಲ ವಿಷ್ಣುಶಂಕರ್ ಜೈನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸಂಭಲ್‌ನ ಹಿರಿಯ ದಿವಾಣಿ ನ್ಯಾಯಾಲಯ, ಮಸೀದಿ ಸಮೀಕ್ಷೆಗೆ ನ.19ರಂದು ಆದೇಶಿಸಿತ್ತು.
ರಾಕೇಶ್ ಸಿಂಗ್ ರಾಘವ ಅವರನ್ನು 'ಕಮಿಷನರ್' ಆಗಿ ನೇಮಕ ಮಾಡಿರುವ ನ್ಯಾಯಾಲಯ, 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿತ್ತು.
ಇದನ್ನು ವಿರೋಧಿಸಿ, ನ.24ರಂದು ಪ್ರತಿಭಟನೆ ಆರಂಭವಾಯಿತು. ನಂತರ ಹಿಂಸಾರೂಪ ಪಡೆದಿದ್ದ ಪ್ರತಿಭಟನೆಯಲ್ಲಿ ನಾಲ್ವರು ಮೃತಪಟ್ಟಿದ್ದರು.
ಮಸೀದಿ ಸಮಿತಿ ಪರ ಹಿರಿಯ ವಕೀಲ ಹುಜೇಫಾ ಅಹ್ಮದಿ ಹಾಗೂ ಉತ್ತರ ಪ್ರದೇಶ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಹಾಜರಿದ್ದರು.
ಜ.8ಕ್ಕೆ ವಿಚಾರಣೆ
ಸಂಭಲ್‌ಜಿಲ್ಲೆಯ ಚಂದೌಸಿಯಲ್ಲಿರುವ ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ಸಂಬಂಧಿಸಿದ ವರದಿಯನ್ನು 10 ದಿನಗಳ ಒಳಗಾಗಿ ಸಲ್ಲಿಸುವಂತೆ ಕೋರ್ಟ್ ನೇಮಕ ಮಾಡಿರುವ 'ಕಮಿಷನರ್'ಗೆ ಸಿವಿಲ್ ನ್ಯಾಯಾಧೀಶ ಆದಿತ್ಯ ಸಿಂಗ್ ಶುಕ್ರವಾರ ನಿರ್ದೇಶನ ನೀಡಿದ್ದಾರೆ.
'ಸಮೀಕ್ಷೆ ವರದಿ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಹೆಚ್ಚುವರಿ ಕಾಲಾವಕಾಶ ಅಗತ್ಯವಿದೆ ಎಂಬುದನ್ನು ಕೋರ್ಟ್ ಗಮನಕ್ಕೆ ತರಲಾಯಿತು. ನಮ್ಮ ಮನವಿಯನ್ನು ಪರಿಗಣಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಜ.8ಕ್ಕೆ ನಿಗದಿ ಮಾಡಿದ್ದಾರೆ' ಎಂದು ಕೋರ್ಟ್ ನೇಮಕ ಮಾಡಿರುವ ಕಮಿಷನರ್ ರಾಕೇಶ್ ಸಿಂಗ್ ರಾಘವ ಹೇಳಿದ್ದಾರೆ.
'ಕೋರ್ಟ್ ಕಮಿಷನರ್' ಅವರು ಸಮೀಕ್ಷೆ ನಡೆಸುವ ವೇಳೆ ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು' ಎಂದು ಮಸೀದಿ ಸಮಿತಿ ಪರ ವಕೀಲ ಅಮೀರ್ ಹುಸೇನ್ ಹೇಳಿದ್ದಾರೆ.