ನವದೆಹಲಿ: ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳು ಹಳಿಗೆ ಇಳಿಯುವುದು ಇನ್ನೂ ವಿಳಂಬವಾಗಲಿದೆ ಎಂಬ ಮಾಧ್ಯಮ ವರದಿಗಳನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಳ್ಳಿ ಹಾಕಿದ್ದಾರೆ.
ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳ ವಿನ್ಯಾಸದ ವಿಚಾರವಾಗಿ ಇಲಾಖೆ ಹಾಗೂ ನಿರ್ಮಾಣ ಕಂಪನಿ ನಡುವೆ ಸಮಸ್ಯೆ ತಲೆದೂರಿದೆ.
ಇದರಿಂದ ಹೊಸ ಸ್ಲೀಪರ್ ಕೋಚ್ ರೈಲುಗಳ ಸೇವೆ ವಿಳಂಬವಾಗಲಿದೆ ಎಂದು ಕೆಲ ಮಾಧ್ಯಮ ವರದಿಗಳು ಹೇಳಿದ್ದವು.
ಈ ಬಗ್ಗೆ ಮಾಧ್ಯಮಗಳ ಜೊತೆ ಗುರುವಾರ ಮಾತನಾಡಿರುವ ಅಶ್ವಿನಿ ವೈಷ್ಣವ್, ಈ ರೀತಿಯ ವರದಿಗಳು ಆಧಾರರಹಿತ. ರಷಿಯನ್ ಕಂಪನಿ ಕೋಚ್‌ಗಳ ನಿರ್ಮಾಣದ ಹೊಣೆ ಹೊತ್ತಿದೆ. ವಿನ್ಯಾಸದ ದೃಷ್ಟಿಯಲ್ಲಿ ಈ ಕಂಪನಿ ಜೊತೆ ಯಾವುದೇ ಸಂಘರ್ಷ ನಡೆದಿಲ್ಲ. ರೈಲುಗಳು ನಾವು ಎಂದುಕೊಂಡಂತೆ 2025ರ ಅಂತ್ಯಕ್ಕೆ ಹಳಿಗೆ ಇಳಿಯಲಿವೆ ಎಂದು ಹೇಳಿದ್ದಾರೆ.
ರಷ್ಯಾದ ಟ್ರಾನ್ಸ್‌ಮಾಹೋಲ್ಡಿಂಗ್ (Transmashholding (TMH)) ಕಂಪನಿ ವಂದೇ ಭಾರತ್ ರೈಲುಗಳ ಕೋಚ್‌ಗಳನ್ನು ನಿರ್ಮಾಣ ಮಾಡುತ್ತಿದೆ. ರಷ್ಯಾದಲ್ಲಿ ಈ ಕಂಪನಿ ಗರಿಷ್ಠ ಒಂದು ರೈಲು ಎಂಜಿನ್‌ಗೆ 8ರಿಂದ 10 ಬೋಗಿಗಳನ್ನು ಅಳವಡಿಸಿರುವ ಅನುಭವ ಇದೆ. ಆದರೆ, ನಾವು ಕೆಲ ಮಾರ್ಗಕ್ಕೆ ಗರಿಷ್ಠ 24 ಬೋಗಿಗಳನ್ನು ಅಳವಡಿಸಲು ಚಿಂತಿಸಿದ್ದೇವೆ. ಇದೇ ವಿಚಾರದಲ್ಲಿ ಕಂಪನಿ ಜೊತೆ ಪುನರ್ ಮಾತುಕತೆ ನಡೆದಿತ್ತು. ವಿನ್ಯಾಸದ ವಿಚಾರದಲ್ಲಿ ಯಾವುದೇ ವಿಳಂಬ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಷ್ಯಾದಲ್ಲಿ ಕಡಿಮೆ ಜನಸಂಖ್ಯೆ ಇರುವುದರಿಂದ ಅಲ್ಲಿ 8ರಿಂದ 10 ಬೋಗಿಗಳ ರೈಲುಗಳ ಸೇವೆ ಇದೆ. ಆದರೆ, ಇಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ನಾವು ಬೋಗಿಳ ಸಂಖ್ಯೆಯನ್ನು ಹೆಚ್ಚಿಸಬೇಕಾಗಿದೆ. ನಿರ್ಮಾಣ ಸಂಸ್ಥೆ 1920 ಸ್ಲೀಪರ್ ಕೋಚ್‌ಗಳನ್ನು ನಿರ್ಮಿಸುವಲ್ಲಿ ತೊಡಗಿದೆ ಎಂದು ಹೇಳಿದ್ದಾರೆ.
ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳಲ್ಲಿ ಇಂಡಿಯನ್ ಟಾಯ್ಲೆಟ್ ನಿರ್ಮಿಸುವ ಕುರಿತು ರೈಲ್ವೆ ಇಲಾಖೆ ಹಾಗೂ ಟ್ರಾನ್ಸ್‌ಮಾಹೋಲ್ಡಿಂಗ್ ನಡುವೆ ಬಿಕ್ಕಟ್ಟು ತಲೆದೂರಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.