HEALTH TIPS

ಬೆಂಗಳೂರಿನ ಮಹಿಳೆ ವರಿಸಿದ ಸ್ವಾಮೀಜಿ

Top Post Ad

Click to join Samarasasudhi Official Whatsapp Group

Qries

 ಚೆನ್ನೈ: ಕಾವೇರಿ ಕಣಿವೆಯ ಕುಂಭಕೋಣಂನಲ್ಲಿರುವ ಪ್ರಸಿದ್ಧ ಸೂರ್ಯನಾರ್ ದೇವಸ್ಥಾನದ ಮಠಾಧೀಶರಾದ 54 ವರ್ಷದ ಮಹಾಲಿಂಗ ಸ್ವಾಮೀಜಿ ಅವರು ತಮ್ಮ ಭಕ್ತೆ, ಬೆಂಗಳೂರಿನ 47 ವರ್ಷದ ಹೇಮಾ ಶ್ರೀ ಅವರನ್ನು ಕಳೆದ ತಿಂಗಳು ವಿವಾಹವಾಗುವ ಮೂಲಕ ಬ್ರಹ್ಮಚರ್ಯ ಮುರಿದಿದ್ದಾರೆ.

ಸ್ವಾಮೀಜಿ ಹಠಾತ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಸಂಗತಿಯನ್ನು ವಾರಗಟ್ಟಲೆ ರಹಸ್ಯವಾಗಿಟ್ಟಿದ್ದು, ಇದು ಈಗ ಬಹಿರಂಗವಾಗುತ್ತಿದ್ದಂತೆ ತಮಿಳುನಾಡಿನಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ನೂರಾರು ಕೋಟಿ ರೂಪಾಯಿ ಆಸ್ತಿ ಹೊಂದಿರುವ ಮಠದ 'ಅಧೀನಂ' (ಮಠದ ಮುಖ್ಯಸ್ಥ) ಸ್ಥಾನ ತೊರೆಯುವಂತೆ ಭಕ್ತರು ಸ್ವಾಮೀಜಿ ಮೇಲೆ ಒತ್ತಡ ಹೇರಿದ್ದಾರೆ.

ತಂಜಾವೂರು ಜಿಲ್ಲೆಯ ಕುಂಭಕೋಣಂನಲ್ಲಿರುವ ಸೂರ್ಯನಾರ್ ದೇವಸ್ಥಾನದ 'ಅಧೀನಂ'ನ 28ನೇ ಮುಖ್ಯಸ್ಥರಾಗಿ 2022ರಲ್ಲಿ ಅಧಿಕಾರ ವಹಿಸಿಕೊಂಡ ಮಹಾಲಿಂಗ ಸ್ವಾಮೀಜಿ, ಕಳೆದ ಅಕ್ಟೋಬರ್ 10ರಂದು ಬೆಂಗಳೂರಿನಲ್ಲಿ ಹೇಮಾ ಶ್ರೀ ಅವರನ್ನು ವರಿಸಿದ್ದಾರೆ.

ತಮಿಳುನಾಡಿನಲ್ಲಿ ಶತಮಾನಗಳ ಹಿಂದೆ ಸ್ಥಾಪಿಸಲಾದ 18 ಶೈವ ಮಠಗಳಲ್ಲಿ ಸೂರ್ಯನಾರ್ ದೇವಾಲಯದ ಮಠವೂ ಒಂದೆನಿಸಿದೆ. ಶೈವ ಸಿದ್ಧಾಂತದ ತತ್ವ ಪ್ರಚಾರ ಮಾಡುವ ಶೈವ ಮಠಗಳು ಭಾರಿ ಪ್ರಮಾಣದಲ್ಲಿ ಜಮೀನು ಮತ್ತು ಆಸ್ತಿ ಹೊಂದಿವೆ. 2023ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೊಸ ಸಂಸತ್ತಿನ ಕಟ್ಟಡದಲ್ಲಿ ಸೆಂಗೋಲ್ ಸ್ಥಾಪಿಸಲು ನವದೆಹಲಿಗೆ ಶೈವ ಮಠಾಧೀಶರನ್ನು ಆಹ್ವಾನಿಸಿದ್ದರು.

ಸೂರ್ಯನಾರ್ ದೇವಾಲಯ ನಿರ್ವಹಿಸುವ ಗ್ರಾಮಸ್ಥರು ಮತ್ತು ಮಠದ ಅನುಯಾಯಿಗಳು ಮಂಗಳವಾರ ಮಹಾಲಿಂಗ ಸ್ವಾಮೀಜಿ ಅವರನ್ನು ಮಠದ ಪ್ರಧಾನ ಕಚೇರಿಯಿಂದ ಬಲವಂತವಾಗಿ ಹೊರಹಾಕಲು ಯತ್ನಿಸಿದರು. ಆದರೆ, ಅದು ಸಾಧ್ಯವಾಗಲಿಲ್ಲ. ವಿವಾಹವಾಗಿರುವುದನ್ನು ಪ್ರಶ್ನಿಸಿದ್ದಕ್ಕಾಗಿ ತಮ್ಮ ಶಿಷ್ಯ ಸ್ವಾಮಿನಾಥ ಸ್ವಾಮೀಜಿಯವರನ್ನು ಪ್ರತೀಕಾರದ ಕ್ರಮವಾಗಿ ವಜಾಗೊಳಿಸಿದ ಮಹಾಲಿಂಗ ಸ್ವಾಮೀಜಿ, ತಮಿಳುನಾಡು ಸರ್ಕಾರದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಪತ್ರ ಬರೆದು ಮಠದ ಆಡಳಿತವನ್ನು ಸುಪರ್ದಿಗೆ ಪಡೆಯುವಂತೆ ಕೋರಿದ್ದಾರೆ.

ತನ್ನ ಭಕ್ತೆಯೊಂದಿಗೆ ವಿವಾಹವಾಗಿರುವುದನ್ನು ಸಮರ್ಥಿಸಿಕೊಂಡಿರುವ ಮಹಾಲಿಂಗ ಸ್ವಾಮೀಜಿ, 'ಈ ಹಿಂದೆ ಮಠಾಧೀಶರು ವಿವಾಹವಾದ ಸಾಕಷ್ಟು ಉದಾಹರಣೆಗಳಿವೆ. ನಾನು ಮದುವೆ ನೋಂದಾಯಿಸಿದ್ದು, ಇದು ಖಾಸಗಿ ವಿಚಾರ. ಮಠಾಧೀಶನಾಗಿಯೇ ಮುಂದುವರಿಯುವೆ' ಎಂದು ಹೇಳಿಕೆ ನೀಡಿದ್ದಾರೆ.

ಮಹಾಲಿಂಗ ಸ್ವಾಮೀಜಿ ಅವರು ಮಠದ ಕೇಂದ್ರ ಕಚೇರಿ ತೊರೆಯದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು, ತಕ್ಷಣವೇ ಮಠವನ್ನು ತೊರೆಯಬೇಕೆಂದು ಪಟ್ಟುಹಿಡಿದರು. ಭಕ್ತರ ಒತ್ತಡಕ್ಕೆ ಸೊಪ್ಪು ಹಾಕದ ಸ್ವಾಮೀಜಿ, ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು, ಮಠದ ಆಡಳಿತವನ್ನು ಅವರ ಸುಪರ್ದಿಗೆ ಒಪ್ಪಿಸುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲವೆಂದು ಪಟ್ಟುಹಿಡಿದರು. ಇದರಿಂದ ಮಠದ ಆವರಣದಲ್ಲಿ ಗದ್ದಲ ಮುಂದುವರಿದೇ ಇತ್ತು.

'ಈ ವಿಷಯದ ಬಗ್ಗೆ ನಾವು ಕಾನೂನು ತಜ್ಞರನ್ನು ಸಂಪರ್ಕಿಸುತ್ತಿದ್ದೇವೆ. ನಮ್ಮ ನಿರ್ಧಾರವನ್ನು ಶೀಘ್ರವೇ ಪ್ರಕಟಿಸುತ್ತೇವೆ. ಮಠಾಧೀಶರ ಒಡೆತನದ ಆಸ್ತಿಗಳ ವಿವರವಾದ ಮೌಲ್ಯಮಾಪನ ಕೂಡ ಮಾಡಲಾಗುವುದು' ಎಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ಪಿ.ಕೆ. ಶೇಖರ್‌ಬಾಬು ಪ್ರತಿಕ್ರಿಯಿಸಿದ್ದಾರೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries