HEALTH TIPS

ಚುನಾವಣಾ ಆಯೋಗ-ಕಾಂಗ್ರೆಸ್‌ ವಾಕ್ಸಮರ | ಇ.ಸಿ ಭಾಷೆ, ಉತ್ತರದ ಧಾಟಿಗೆ 'ಕೈ' ಕಿಡಿ

 ವದೆಹಲಿ: ಚುನಾವಣಾ ಆಯೋಗ ಮತ್ತು ಕಾಂಗ್ರೆಸ್‌ ಪಕ್ಷದ ನಡುವಣ ವಾಕ್ಸಮರ ತೀವ್ರಗೊಂಡಿದೆ. ಹರಿಯಾಣ ವಿಧಾನಸಭೆ ಚುನಾವಣಾ ಅಕ್ರಮ ಕುರಿತ ದೂರಿಗೆ ನೀಡಿದ್ದ ಪ್ರತಿಕ್ರಿಯೆಯಲ್ಲಿ ಪಕ್ಷವನ್ನೇ ಟೀಕಿಸಿರುವ ಕೇಂದ್ರ ಚುನಾವಣಾ ಆಯೋಗದ ನಿಲುವಿಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.

'ಮುಂದೆ ಇಂತಹ ಭಾಷೆ, ಪದಬಳಕೆಯನ್ನು ಹಗುರವಾಗಿ ಪರಿಗಣಿಸಲಾಗದು' ಎಂದೂ ಎಚ್ಚರಿಸಿದೆ.

ಹರಿಯಾಣದ 26 ಕ್ಷೇತ್ರಗಳಲ್ಲಿ ನಡೆದಿದೆ ಎನ್ನಲಾದ ನಿರ್ದಿಷ್ಟ ಅಕ್ರಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ದೂರು ನೀಡಿತ್ತು. 'ಅದಕ್ಕೆ ಪ್ರತಿಕ್ರಿಯಿಸುವ ವಿಷಯದಲ್ಲಿ ಆಯೋಗವು ತನಗೆ ತಾನೇ ಪರಿಶುದ್ಧ ಎಂದು ಹೇಳಿಕೊಂಡಿರುವುದು ಪಕ್ಷಕ್ಕೆ ‌ಆಶ್ಚರ್ಯ ಉಂಟುಮಾಡಿಲ್ಲ' ಎಂದು ಹೇಳಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಯೋಗವು ಅಕ್ಟೋಬರ್ 29ರಂದು ಬರೆದಿತ್ತು. 'ಚುನಾವಣೆಯ ಸೂಕ್ಷ್ಮ ಹಂತಗಳಲ್ಲಿ ಹೊಣೆಗಾರಿಕೆಯಿಂದ ವರ್ತಿಸಿ ಸಾರ್ವಜನಿಕ ಅಶಾಂತಿ ಮತ್ತು ಗೊಂದಲ ಸೃಷ್ಟಿಯಾಗುವ ಸಾಧ್ಯತೆಯನ್ನು ತಡೆಯಬೇಕು' ಎಂದು ಪತ್ರದಲ್ಲಿ ಹೇಳಲಾಗಿತ್ತು.

ಕಾಂಗ್ರೆಸ್‌ನ ಕೆ.ಸಿ.ವೇಣುಗೋಪಾಲ್, ಜೈರಾಮ್‌ ರಮೇಶ್ ಸೇರಿ ಪಕ್ಷದ ಒಂಬತ್ತು ನಾಯಕರು ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಮೂರು ಪುಟಗಳ ಈ ಪತ್ರದಲ್ಲಿ, 'ಸಾಮಾನ್ಯವಾಗಿ ನಾವು ಪ್ರತಿಕ್ರಿಯಿಸದೇ ಸುಮ್ಮನಾಗುತ್ತಿದ್ದೆವು. ಆದರೆ, ಆಯೋಗ ತನ್ನ ಪತ್ರದಲ್ಲಿ ಬಳಸಿರುವ ಪದಗಳು ಹಾಗೂ ಭಾಷೆ, ಉತ್ತರಿಸಿರುವ ಧಾಟಿ ಮತ್ತು ಪಕ್ಷದ ವಿರುದ್ಧ ಮಾಡಿರುವ ಟೀಕೆಗಳಿಂದಾಗಿ ಈಗ ಪ್ರತಿಕ್ರಿಯೆ ನೀಡಲೇಬೇಕಾಗಿದೆ' ಎಂದಿದ್ದಾರೆ.

'ಆಯೋಗವು ಈ ಧಾಟಿಯಲ್ಲಿ ಉತ್ತರಿಸಿದರೆ ಇನ್ನುಮುಂದೆ ಹಗುರವಾಗಿ ಪರಿಗಣಿಸಲಾಗದು. ಆಯೋಗದ ಇತ್ತೀಚಿನ ಪ್ರತಿ ಉತ್ತರದಲ್ಲಿಯೂ ವ್ಯಕ್ತಿಗತವಾಗಿ ಪಕ್ಷದ ನಾಯಕರನ್ನು ಅಥವಾ ಇಡಿಯಾಗಿ ಪಕ್ಷವನ್ನೇ ಗುರಿಯಾಗಿಸಿ ಟೀಕಿಸಲಾಗಿದೆ' ಎಂದು ಪತ್ರದಲ್ಲಿ ಕಾಂಗ್ರೆಸ್ ಆಕ್ಷೇಪಿಸಿದೆ.

ಕಾಂಗ್ರೆಸ್‌ ಪಕ್ಷ ಇತ್ತೀಚೆಗೆ ನೀಡಿದ್ದ ದೂರಿನಲ್ಲಿ ನೋವು ತೋಡಿಕೊಂಡಿರಲಿಲ್ಲ. ದೂರಿಗೆ ಪೂರಕವಾಗಿ ಕಾನೂನು ಪ್ರಕ್ರಿಯೆ ನಡೆಸುವುದಕ್ಕೆ ಅಗತ್ಯವಾದ ಹಾಗೂ ವಾದವನ್ನು ಸಮರ್ಥಿಸುವ ದಾಖಲೆಗಳನ್ನು ನೀಡಿತ್ತು. ಇಲ್ಲದಿದ್ದರೆ, ಆಯೋಗವು ಈ ಹಿಂದೆ ಮಾಡಿದ್ದಂತೆ ಈ ಬಾರಿಯೂ ಹೆಸರು ಉಲ್ಲೇಖಿಸಿಯೇ ಟೀಕೆ ಮಾಡುತ್ತಿತ್ತು ಎಂದೂ ಹೇಳಿದೆ.

'ಪ್ರಧಾನಿ ಮತ್ತು ಗೃಹ ಸಚಿವರ ವಿರುದ್ಧ ಪಕ್ಷ ನೂರು ದೂರುಗಳನ್ನು ಕೊಟ್ಟಿರಬಹುದು. ಆದರೆ, ಆಯೋಗ ಒಂದು ದೂರಿನ ಬಗ್ಗೆಯೂ ಸರಿಯಾದ ಕ್ರಮ ವಹಿಸಿಲ್ಲ. ಬದಲಾಗಿ, ಪಕ್ಷದ ಅಧ್ಯಕ್ಷರಾದ ಖರ್ಗೆ ಮತ್ತು ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಕ್ರಿಯೆ ಮತ್ತು ಮಾತುಗಳ ಬಗ್ಗೆ ಎಚ್ಚರವಿರಲಿ ಎಂದು ಎಚ್ಚರಿಕೆ ನೀಡಿದೆ' ಎಂದು ಈ ನಾಯಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

'ಚುನಾವಣಾ ಆಯೋಗ ಎಂದಿಗೂ ಸ್ಪಷ್ಟವಾಗಿ ವಿರೋಧವನ್ನು ದಾಖಲಿಸಿಲ್ಲ. ಬದಲಾಗಿ ದೂರುಗಳನ್ನೇ ಹತ್ತಿಕ್ಕಿದೆ. ಚುನಾವಣಾ ಪ್ರಕ್ರಿಯೆಯಲ್ಲೂ ಪಾರದರ್ಶಕತೆಗೆ ಎಂದಿಗೂ ಒತ್ತುನೀಡಿಲ್ಲ ಅಥವಾ ವಿ.ವಿ ಪ್ಯಾಟ್‌ ಪರಿಶೀಲನೆಯನ್ನು ಕ್ರಮಬದ್ಧಗೊಳಿಸಲು ಕೂಡ ಮುಂದಾಗಿಲ್ಲ. ಅದಕ್ಕೂ ಸುಪ್ರೀಂ ಕೋರ್ಟ್ ಆದೇಶಿಸಬೇಕಾಯಿತು' ಎಂದಿದೆ.

ದೂರಿನಲ್ಲಿ ವಾಸ್ತವಕ್ಕಷ್ಟೆ ಪಕ್ಷ ಒತ್ತು ನೀಡಿದೆ. ಆಯೋಗದ ಉತ್ತರ ಅದನ್ನು ಹತ್ತಿಕ್ಕುವಂತಿದೆ. ಒಂದು ವೇಳೆ 'ತಟಸ್ಥ ನಿಲುವಿನ ಕುರುಹನ್ನು ಕೂಡ ಅಳಿಸಿಹಾಕುವುದೇ ಆಯೋಗದ ಉದ್ದೇಶವಾಗಿದ್ದಲ್ಲಿ, ಆಯೋಗವು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ ಎನ್ನಬೇಕಷ್ಟೆ' ಎಂದು ವಾಗ್ದಾಳಿ ನಡೆಸಿದೆ.

ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನ ಗೆಲ್ಲುವ ಮೂಲಕ ಅಧಿಕಾರಕ್ಕೇರಿತ್ತು. ಕಾಂಗ್ರೆಸ್‌ 37, ಐಎನ್‌ಎಲ್‌ಡಿ ಎರಡು ಮತ್ತು ಮೂರು ಕ್ಷೇತ್ರಗಳಲ್ಲಿ ಪಕ್ಷೇತರರು ಜಯಗಳಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries