ಶ್ರೀನಗರ: ಉಗ್ರರೊಂದಿಗೆ ಸಂಪರ್ಕದಲ್ಲಿದ್ದ ಆರೋಪದಲ್ಲಿ ಜಮ್ಮು ಮತ್ತು ಕಾಶ್ಮೀರದ ಇಬ್ಬರು ಸರ್ಕಾರಿ ನೌಕರರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ. ಸಂವಿಧಾನದ 311ನೇ ವಿಧಿ ಅನ್ವಯ ಕ್ರಮ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಕಣಿವೆ ನಾಡಿನಲ್ಲಿ ಮುಖ್ಯಮಂತ್ರಿಯಾದ ನಂತರ ಮೊದಲ ಸಲ ಇಂತಹ ಪ್ರಕರಣ ವರದಿಯಾಗಿದೆ.
ಅಬ್ದುಲ್ ರೆಹಮಾನ್ ನಾಯ್ಕ್ ಮತ್ತು ಝಹಿರ್ ಅಬ್ಬಾಸ್ ಎಂಬ ಇಬ್ಬರು ವಜಾಗೊಂಡಿದ್ದಾರೆ. ಅಬ್ದುಲ್, ಆರೋಗ್ಯ ಇಲಾಖೆಯಲ್ಲಿದ್ದ. ಅಬ್ಬಾಸ್ ಶಿಕ್ಷಕನಾಗಿದ್ದ. ಇಬ್ಬರೂ, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದರು ಎಂದು ಮೂಲಗಳು ಖಚಿತಪಡಿಸಿವೆ.
ಸಂವಿಧಾನದನ 370ನೇ ವಿಧಿ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರವು 2019ರ ಆಗಸ್ಟ್‌ನಲ್ಲಿ ಹಿಂಪಡೆದಿದೆ. ಅದಾದ ನಂತರ, 311ನೇ ವಿಧಿಯನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯವಾಗುವಂತೆ ವಿಸ್ತರಿಸಲಾಗಿದೆ.
ರಾಷ್ಟ್ರದ ಭದ್ರತೆಗೆ ಹಾನಿ ಮಾಡುವಂತಹ ಚಟುವಟಿಕೆಗಳಲ್ಲಿ ತೊಡಗುವ ನೌಕರರನ್ನು ಯಾವುದೇ ತನಿಖೆ ನಡೆಸದೆಯೇ ಕೆಲಸದಿಂದ ವಜಾಗೊಳಿಸಲು ಈ ವಿಧಿಯು ಅನುವು ಮಾಡಿಕೊಡುತ್ತದೆ.
ಕರ್ತವ್ಯದಿಂದ ವಜಾಗೊಂಡವರು ತಮ್ಮ ವಿರುದ್ಧದ ಕ್ರಮವನ್ನು ಪ್ರಶ್ನಿಸಿ, ಪರಿಹಾರಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಲು ಅವಕಾಶವಿದೆ.
ಪ್ರಕರಣಗಳ ಪರಿಶೀಲನೆ; ಒಮರ್ ಭರವಸೆ
90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ಇದೇ ವರ್ಷ ಸೆಪ್ಟೆಂಬರ್‌ನಲ್ಲಿ 2 ಹಂತಗಳಲ್ಲಿ ಮತದಾನ ನಡೆದಿತ್ತು. ಒಮರ್ ಅಬ್ದುಲ್ಲಾ ಅವರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಮಿತ್ರ ಪಕ್ಷಗಳ ಬೆಂಬಲದೊಂದಿಗೆ ಅಧಿಕಾರಕ್ಕೇರಿದೆ.
ತಮ್ಮ ಪಕ್ಷ ಅಧಿಕಾರಕ್ಕೇರಿದರೆ ಕಳೆದ ಐದು ವರ್ಷಗಳಲ್ಲಿ ವಜಾಗೊಂಡಿರುವವರ ಪ್ರಕರಣಗಳನ್ನು ಪರೀಶಿಲಿಸುತ್ತೇವೆ ಎಂದು ಒಮರ್ ಅವರು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಭರವಸೆ ನೀಡಿದ್ದರು.
ವಿಶೇಷ ಸ್ಥಾನಮಾನ ರದ್ದಾದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ, ಪಾಕ್ ಮೂಲದ ಹಿಜ್ಬುಲ್ ಮುಜಾಹಿದ್ದೀನ್ ನಾಯಕ ಸೈಯದ್ ಸಲಾಹುದ್ದೀನ್‌ನ ಇಬ್ಬರು ಮಕ್ಕಳು, ಕಳಂಕಿತ ಡಿಎಸ್‌ಪಿ ದೇವಿಂದರ್ ಸಿಂಗ್ ಸೇರಿದಂತೆ ಇದುವರೆಗೆ 70ಕ್ಕೂ ಹೆಚ್ಚು ಮಂದಿ ಕರ್ತವ್ಯದಿಂದ ವಜಾಗೊಂಡಿದ್ದಾರೆ. ಹಿಜ್ಬುಲ್‌ಗೆ ಬೆಂಬಲ ನೀಡಿದ್ದಕ್ಕೆ ಸಂಬಂಧಿಸಿದಂತೆ ದೇವಿಂದರ್ ವಿರುದ್ಧ ಎನ್‌ಐಎ ಆರೋಪಪಟ್ಟಿ ಸಲ್ಲಿಸಿದೆ.