ಡಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದ (ಐಸಿಸಿ) ವಿಚಾರಣೆಗೆ ಒಳಪಡಿಸಲು ಪ್ರಯತ್ನಿಸುತ್ತಿರುವುದಾಗಿ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ ಅವರ ಕಚೇರಿ ಗುರುವಾರ ಹೇಳಿದೆ.
ಕಸೀನಾ ಅವರನ್ನು ವಿಚಾರಣೆಗೆ ಒಳಪಡಿಸುವ ಸಂಬಂಧ ಯೂನುಸ್ ಅವರು ಐಸಿಸಿ ಪ್ರಾಸಿಕ್ಯೂಟರ್ ಕರೀಮ್ ಎ.ಖಾನ್ ಅವರೊಂದಿಗೆ ಚರ್ಚಿಸಿದ್ದಾರೆ' ಎಂದು ಕಚೇರಿಯ ಮಾಧ್ಯಮ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಪ್ರತಿಭಟನೆ ವೇಳೆ ನಡೆದ 'ನರಮೇಧ'ಕ್ಕೆ ಸಂಬಂಧಿಸಿದಂತೆ ಹಸೀನಾ ಹಾಗೂ ಇತರರ ವಿಚಾರಣೆ ಬಾಂಗ್ಲಾದೇಶದ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಅದರ ನಡುವೆಯೇ ಅವರನ್ನು ಐಸಿಸಿ ವಿಚಾರಣೆಗೆ ಒಳಪಡಿಸಲು ಮಧ್ಯಂತರ ಸರ್ಕಾರ ಬಯಸಿದೆ. ಆಗಸ್ಟ್ 5ರಂದು ದೇಶ ತೊರೆದಿದ್ದ ಹಸೀನಾ, ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.
ಹಸೀನಾ ಮತ್ತು ಅವರ ಸಂಪುಟದಲ್ಲಿದ್ದ ಸಚಿವರ ವಿರುದ್ಧದ ಹಲವು ಪ್ರಕರಣಗಳಿಗೆ ಸಂಬಂಧಿಸಿದ ವಿಚಾರಣೆಯು ಬಾಂಗ್ಲಾದೇಶದ ಇಂಟರ್ನಲ್ ಕ್ರೈಮ್ಸ್ ಟ್ರಿಬ್ಯುನಲ್‌ನಲ್ಲಿ ಪ್ರಗತಿಯಲ್ಲಿದೆ. ಅವರಲ್ಲಿ ಕೆಲವರು ಜೈಲಿನಲ್ಲಿದ್ದರೆ, ಮತ್ತೆ ಕೆಲವರು ದೇಶ ತೊರೆದಿದ್ದಾರೆ. ಹಸೀನಾ ಅವರನ್ನು ವಿಚಾರಣೆಗೆ ಒಳಪಡಿಸಲು ಭಾರತದಿಂದ ಬಾಂಗ್ಲಾಕ್ಕೆ ಕರೆತರಲು ಯೂನುಸ್ ಅವರು ಈ ಹಿಂದೆ ಇಂಟರ್‌ಪೋಲ್ ನೆರವನ್ನೂ ಕೋರಿದ್ದರು.