HEALTH TIPS

ಉತ್ತರ ಪ್ರದೇಶ | ಮಸೀದಿಯಲ್ಲಿ ಸಮೀಕ್ಷೆ ವೇಳೆ ಕಲ್ಲು ತೂರಾಟ: ಮೂರು ಮಂದಿ ಸಾವು

ಸಂಭಲ್ : ನಗರದ ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರು ಭದ್ರತಾ ಸಿಬ್ಬಂದಿ ಜೊತೆ ಘರ್ಷಣೆಗಿಳಿದಿದ್ದರಿಂದ ಭುಗಿಲೆದ್ದ ಹಿಂಸಾಚಾರದಲ್ಲಿ ಮೂವರು ಮೃತಪಟ್ಟ ಘಟನೆ ಭಾನುವಾರ ನಡೆದಿದೆ.

ಪ್ರತಿಭಟನಕಾರರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದಲ್ಲದೇ, ವಾಹನಗಳಿಗೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆ.

ಕೆಲ ಕಿಡಿಗೇಡಿಗಳು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕುಗಳಿಗೆ ಬೆಂಕಿ ಹಚ್ಚಿದ್ದಾರೆ. ಉದ್ರಿಕ್ತರ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಷೆಲ್‌ಗಳನ್ನು ಸಿಡಿಸಿದ್ದಾರೆ.

'ಘರ್ಷಣೆ ವೇಳೆ ಮೃತಪಟ್ಟವರನ್ನು ನಯೀಮ್, ಬಿಲಾಲ್‌ ಹಾಗೂ ನೌಮಾನ್‌ ಎಂದು ಗುರುತಿಸಲಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗನ್‌ಮ್ಯಾನ್‌ ಸೇರಿದಂತೆ ಕೆಲ ಪೊಲೀಸರು ಗಾಯಗೊಂಡಿದ್ದಾರೆ' ಎಂದು ಮೊರಾದಾಬಾದ್ ವಿಭಾಗೀಯ ಆಯುಕ್ತ ಆಂಜನೇಯ ಕುಮಾರ್‌ ಸಿಂಗ್ ಹೇಳಿದ್ದಾರೆ.

ಘಟನೆ ಸಂಬಂಧ, ಇಬ್ಬರು ಮಹಿಳೆಯರು ಸೇರಿ 10 ಜನರನ್ನು ವಶಕ್ಕೆ ಪಡೆಯಲಾಗಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಪೆಸಿಯಾ ತಿಳಿಸಿದ್ದಾರೆ.

'ಹಿಂಸಾಚಾರದಲ್ಲಿ ತೊಡಗಿದ್ದ ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‌ಎಸ್‌ಎ) ಅಡಿ ಪ್ರಕರಣ ದಾಖಲಿಸಲಾಗುವುದು. ನಗರದ ದೀಪಾ ಸರಾಯ್‌ ಪ್ರದೇಶದಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಅವರು ತೂರಿದ ಕಲ್ಲುಗಳು ತಾಗಿ ಕೆಲ ಪೊಲೀಸರು ಗಾಯಗೊಂಡಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡಿದ್ದೇವೆ' ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಾಮಾ ಮಸೀದಿಯಿದ್ದ ಜಾಗದಲ್ಲಿ ಪುರಾತನ ಹಿಂದೂ ದೇವಾಲಯವಿತ್ತು, ಮೊಘಲ್‌ ದೊರೆ ಬಾಬರ್‌ ಆಳ್ವಿಕೆ ಅವಧಿಯಲ್ಲಿ ದೇಗುಲ ಕೆಡವಿ ಮಸೀದಿ ಕಟ್ಟಲಾಗಿದೆ. ದೇಗುಲಕ್ಕೆ ಸೇರಿದ ಅನೇಕ ಗುರುತುಗಳೂ ಅಲ್ಲಿವೆ ಎಂದು ಸುಪ್ರೀಂ ಕೋರ್ಟ್‌ ವಕೀಲ ವಿಷ್ಣು ಶಂಕರ್‌ ಜೈನ್‌ ಅವರು ಸ್ಥಳೀಯ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌, ವಿಡಿಯೊ ಚಿತ್ರೀಕರಣ ಮತ್ತು ಛಾಯಾಗ್ರಹಣ ಸಮೇತ ಸಮೀಕ್ಷೆ ನಡೆಸಿ, ವರದಿ ಸಲ್ಲಿಸುವಂತೆ ಆದೇಶಿಸಿದೆ.

ನ್ಯಾಯಾಲಯದ ಆದೇಶದಂತೆ ಕೈಗೊಂಡಿರುವ ಸಮೀಕ್ಷೆ ವಿರೋಧಿಸಿ ಮಂಗಳವಾರದಿಂದ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ.

ಘರ್ಷಣೆ ಆರಂಭವಾಗಿದ್ದು ಹೇಗೆ?

ಭಾನುವಾರ ಬೆಳಿಗ್ಗೆ, ಮಸೀದಿ ಬಳಿ ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಮಸೀದಿ ಸಮೀಕ್ಷೆ ನಡೆಸುವ ತಂಡವು ತನ್ನ ಕಾರ್ಯ ಆರಂಭಿಸುತ್ತಿದ್ದಂತೆಯೇ ಅಲ್ಲಿ ಜಮಾಯಿಸಿದ್ದ ಜನರು ಘೋಷಣೆಗಳನ್ನು ಕೂಗಲು ಆರಂಭಿಸಿದರು. ನಂತರ ಅದು ಘರ್ಷಣೆಗೆ ತಿರುಗಿತು.

ಮಧ್ಯಾಹ್ನ ನಡೆಯುವ ಪ್ರಾರ್ಥನೆಗೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಬೆಳಿಗ್ಗೆ ಸಮೀಕ್ಷೆ ನಡೆಸಲು ಯೋಜಿಸಿದ್ದೆವು. ಕೋರ್ಟ್‌ ಆದೇಶದಂತೆ ನೇಮಕವಾಗಿರುವ, 'ಅಡ್ವೊಕೇಟ್ ಕಮಿಷನರ್‌' ಅವರಿಂದ ಮಸೀದಿಯ 2ನೇ ಹಂತದ ಸಮೀಕ್ಷೆಗೆ ಬೆಳಿಗ್ಗೆ 7ರ ಸುಮಾರಿಗೆ ಚಾಲನೆ ನೀಡಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

'ಸಮೀಕ್ಷೆಯು ಶಾಂತಿಯುತವಾಗಿಯೇ ನಡೆಯುತ್ತಿತ್ತು. ಮಸೀದಿ ಸಮೀಪ ಜಮಾಯಿಸಿದ್ದ ಜನರು ಘೋಷಣೆಗಳನ್ನು ಕೂಗಲು ಆರಂಭಿಸಿದರು. ಅವರನ್ನು ಚದುರಿಸಲು ಪೊಲೀಸರು ಮುಂದಾದಾಗ, ದುಷ್ಕರ್ಮಿಗಳ ಗುಂಪೊಂದು ಪೊಲೀಸರತ್ತ ಕಲ್ಲುಗಳನ್ನು ತೂರಲು ಆರಂಭಿಸಿತು. ನಂತರ ಘರ್ಷಣೆ ಹಿಂಸಾರೂಪ ಪಡೆಯಿತು' ಎಂದು ಮೊರಾದಾಬಾದ್ ವಿಭಾಗೀಯ ಆಯುಕ್ತ ಆಂಜನೇಯ ಸಿಂಗ್ ಹೇಳಿದ್ದಾರೆ.

'ಪಟ್ಟಭದ್ರಹಿತಾಸಕ್ತಿಯುಳ್ಳ ಕೆಲವರು ಶಾಂತಿ ಕದಡುವ ಉದ್ದೇಶದಿಂದ ಹಿಂಸಾಚಾರಕ್ಕೆ ಪ್ರಚೋದನೆ ಕೊಟ್ಟಿದ್ದಾರೆ' ಎಂದು ಹೇಳಿದ್ದಾರೆ.

'ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಅಶ್ರುವಾಯು ಷೆಲ್ ಹಾಗೂ ಲಾಠಿ ಪ್ರಹಾರದಂತಹ ಕ್ರಮ ಕೈಗೊಂಡಿದ್ದಾರೆ' ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೃಷ್ಣಕುಮಾರ್ ವಿಷ್ಣೋಯಿ ತಿಳಿಸಿದ್ದಾರೆ.

ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರ, ಮಸೀದಿ ಸಮಿತಿ ಹಾಗೂ ಜಿಲ್ಲಾಧಿಕಾರಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಶಾಂತಕುಮಾರ್ ಪೊಲೀಸ್‌ ಮುಖ್ಯಸ್ಥ ಉತ್ತರ ಪ್ರದೇಶಸಮಾಜಘಾತುಕ ಶಕ್ತಿಗಳನ್ನು ಗುರುತಿಸಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಜಿಲ್ಲಾ ಆಡಳಿತದ ಅಧಿಕಾರಿಗಳು ಪರಿಸ್ಥಿತಿ ಮೇಲೆ ನಿಗಾ ಇಟ್ಟಿದ್ದಾರೆಲಖನೌ: 'ಸಂಭಲ್‌ನಲ್ಲಿನ ಘಟನೆ ಗಂಭೀರವಾದುದು. ಚುನಾವಣೆಗಳ ಕುರಿತ ಚರ್ಚೆಗಳಿಗೆ ಅಡ್ಡಿಪಡಿಸುವುದಕ್ಕಾಗಿ ಉದ್ದೇಶಪೂರ್ವಕವಾಗಿ ಬೆಳಿಗ್ಗೆ ಹೊತ್ತಿನಲ್ಲಿ ಸಮೀಕ್ಷೆ ಕೈಗೊಳ್ಳಲಾಗಿದೆ' ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖೀಲೇಶ್‌ ಯಾದವ್ ದೂರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 'ಸಮೀಕ್ಷೆ ಕುರಿತ ಕಾನೂನು ಅಥವಾ ಪ್ರಕ್ರಿಯೆಗಳ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಮತ್ತೊಂದು ಕಡೆಯವರ ಮಾತು ಆಲಿಸಿಲ್ಲ. ಭಾವನೆಗಳನ್ನು ಕೆರಳಿಸುವುದಕ್ಕಾಗಿ ಈ ರೀತಿ ಉದ್ದೇಶಪೂರ್ವಕವಾಗಿ ಮಾಡಲಾಗಿದೆ' ಎಂದರು. 'ಸಂಭಲ್‌ನಲ್ಲಿ ನಡೆದಿರುವುದು ಬಿಜೆಪಿ ರಾಜ್ಯ ಸರ್ಕಾರದ ಪೂರ್ವನಿಯೋಜಿತ ಕೃತ್ಯ. ಚುನಾವಣೆಯಲ್ಲಿನ ಅಕ್ರಮಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಹೀಗೆ ಮಾಡಲಾಗಿದೆ' ಎಂದೂ ಆರೋಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries