ಕಾಸರಗೋಡು: ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ ಪಾರೆಕಟ್ಟ ಕನ್ನಡ ಗ್ರಾಮದಲ್ಲಿ ನ. 10ರಂದು ನಡೆಯಲಿದೆ. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ಕಾಸರಗೋಡು ಇದರ ಆಶ್ರಯದಲ್ಲಿ ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ, ಕನ್ನಡ ಗ್ರಾಮ ಕಾಸರಗೋಡು ಇದರ ಸಹಯೋಗದಲ್ಲಿ ಕಾರ್ಯಕ್ರಮ ಜರುಗಲಿದೆ. ಬೆಳಗ್ಗೆ 9.15ಕ್ಕೆ ಕೂಡ್ಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಠಾರದಿಂದ ಸಮ್ಮೇಳನಾಧ್ಯಕ್ಷರು, ಅತಿಥಿಗಳನ್ನೊಳಗೊಂಡ ಸಾಂಸ್ಕøತಿಕ ಮೆರವಣಿಗೆ ಆರಂಭಗೊಳ್ಳುವುದು. ಈ ಸಂದರ್ಭ'ನಮ್ಮ ಕಾಸರಗೋಡು ನಮ್ಮೆ ಹೆಮ್ಮೆ' ವರ್ಷಾಚರಣೆ ಅಂಗವಾಗಿ ಕನ್ನಡ ಗ್ರಾಮದಲ್ಲಿ ನೆಟ್ಟುಬೆಳೆಸಲಿರುವ 60ಸಸಿಗಳನ್ನು ಮೆರವಣಿಗೆ ಮೂಲಕ ತರಲಾಗುವುದು. ಉಳ್ಳಾಲ ಠಾಣೆ ಪೊಲೀಸ್ ಇನ್ಸ್‍ಪೆಕ್ಟರ್ ಬಾಲಕೃಷ್ಣ ಸಾಂಸ್ಕøತಿಕ ಮೆರವಣಿಗೆ ಉದ್ಘಾಟಿಸುವರು. ಸಮ್ಮೇಳನ ನಗರದಲ್ಲಿ ನಗರಸಭಾ ಸದಸ್ಯೆ ಶಾರದಾ ಜೆ.ಪಿ ನಗರ ರಾಷ್ಟ್ರಧ್ವಜ, ಶಿವರಾಂ ಕಾಸರಗೋಡು ಅವರು ಮಕ್ಕಳ ಸಾಹಿತ್ಯ ಪರಿಷತ್ ಧ್ವಜ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಶಶಿಧರ ಕೂಡ್ಲು ಅವರು ಕನ್ನಡ ಧ್ವಜಾರೋಹಣ ನಡೆಸುವರು. 10ರಿಂದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ನಡೆಯುವುದು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಸಿ.ಎನ್ ಅಶೋಕ್ ಸಮಾರಂಭ ಉದ್ಘಾಟಿಸುವರು. ಶ್ರವಣಬೆಳಗೋಳ ಶಾಸಕ ಸಿ.ಎನ್ ಬಾಲಕೃಷ್ಣ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಹರ್ಷಿತಾ ಪಿ. ಸರ್ವಾಧ್ಯಕ್ಷೆ ಹಾಗೂ ಶಿವಾನಿ ಕೂಡ್ಲು ಸಹ ಅಧ್ಯಕ್ಷೆಯಾಗಿರುವರು.
ಪುಸ್ತಕ ಪ್ರದರ್ಶನ, ಕಲಾ ಪ್ರದರ್ಶನ, ತೆಂಕುತಿಟ್ಟಿನ ಯಕ್ಷಗಾನ ವೇಷಭೂಷಣಗಳ ಪ್ರದರ್ಶನ, ಕೃಷಿ-ಹಣ್ಣುಹಂಪಲು ಪ್ರದರ್ಶನ, ಗ್ರಾಮೀಣ ಆಹಾರಮೇಳ, ವೈದ್ಯಕೀಯ ತಪಾಸಣೆ, ವಿದ್ಯಾರ್ಥಿಪ್ರತಿನಿಧಿಗಳ ನೋಂದಾವಣೆ ಕಾರ್ಯಾಲಯ, ವಿವಿಧ ಕ್ಷೇತ್ರಗಳ ಪ್ರತಿನಿಧಿಗಳ ಕಾರ್ಯಾಲಯ, ಮಕ್ಕಳ ಸ್ಪರ್ಧಾವೇದಿಕೆಯ ಉದ್ಘಾಟನೆ ನಡೆಯುವುದು.
ಈ ಸಂದರ್ಭ ಶಾಲಿನಿ ಸತೀಶ್ ಶೆಟ್ಟಿ ಥಾಣೆ ಅವರಿಗೆ ಕರಾವಳಿ ಪ್ರತಿಭಾಶಾಲಿನ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ರಾಜ್ಯಮಟ್ಟದ ವಿದ್ಯಾರ್ಥಿ ಕವಿಗೋಷ್ಠಿ, ಸಣ್ಣ ಕಥಾ ಗೋಷ್ಠಿ, ಸಾಂಸ್ಕøತಿಕ-ಕಲಾ ಕಾರ್ಯಕ್ರಮ ಜರುಗುವುದು.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಾಹಿತ್ಯ ಸಾಂಸ್ಕøತಿಕ ರಾಯಭಾರಿ ಆಯಿಷಾ ಪೆರ್ಲ ಸಮಾರೋಪಭಾಷಣ ಮಾಡುವರು. ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಸಿ.ಎನ್ ಅಶೋಕ್ ಅಧ್ಯಕ್ಷತೆ ವಹಿಸುವರು. ಕುಂಟಾರು ರವೀಶ ತಂತ್ರಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಮಕ್ಕಳ ಸಾಹಿತ್ಯ ಸಮ್ಮೇಳನ-ಹರ್ಷಿತ ಸರ್ವಾಧ್ಯಕ್ಷೆ:
ಕನ್ನಡ ಗ್ರಾಮದಲ್ಲಿ 2024 ನವೆಂಬರ್ 10ರಂದು ನಡೆಯಲಿರುವ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು, ಸರ್ವಾಧ್ಯಕ್ಷರಾಗಿ ಪೆರ್ಲದ ಪಳ್ಳಕಾನ ನಿವಾಸಿ ಬದಿಯಡ್ಕ ಭಾರತಿ ವಿದ್ಯಾಪೀಠದ ವಿದ್ಯಾರ್ಥಿನಿ ಬಹುಭಾಷಾ ಕವಯತ್ರಿ ಹರ್ಷಿತಾ ಪಿ. ಮುನ್ನಡೆಸಲಿದ್ದಾರೆ. ಐತಪ್ಪ ನಾಯ್ಕ ವೈ-ನಳಿನಿ ದಂಪತಿ ಪುತ್ರಿಯಾದ ಹರ್ಷಿತಾ ಪಿ 9ನೇ ತರಗತಿ ವಿದ್ಯಾರ್ಥಿನಿ. ಕನ್ನಡ, ಇಂಗ್ಕಿಷ್ ಹಾಗೂ ಸಂಸ್ಕೃತ ಭಾಷಾ ಕವಿತೆಗಳನ್ನು ರಚಿಸುವ ಇವರು ಕನ್ನಡ, ಇಂಗ್ಲಿಷ್ ಕಥೆ ರಚನೆ, ಇಂಗ್ಲಿಷ್ ಕನ್ನಡ ಮತ್ತು ಮಾತೃಭಾಷೆ ಮರಾಟಿಯಲ್ಲಿ ನಿರರ್ಗಳ ಭಾಷಣ ಮಾಡುತ್ತಾರೆ. ಯಕ್ಷಗಾನ ಅಭ್ಯಾಸಿಸುತ್ತಿರುವ ಹರ್ಷಿತಾ ಹಲವಾರು ಕವಿಗೋಷ್ಠಿಗಳಲ್ಲಿ ತನ್ನ ಸ್ವರಚಿತ ಕವನಗಳನ್ನು ಪ್ರಸ್ತುತಪಡಿಸಿ ಜನಮನ್ನಣೆ ಗಳಿಸಿಕೊಂಡಿದ್ದಾಳೆ.