ಚಳಿಗಾಲ ಆರಂಭವಾಗುತ್ತಿದೆ. ಮಳೆಗಾಲು ಮುಗಿದು ಕಳೆದೊಂದು ವಾರದಿಂದ ಚಳಿಗಾಳಿ ಬೀಸಲು ಆರಂಭಿಸಿದೆ. ಚಳಿಗಾಲ ಬೇರೆಲ್ಲಾ ಕಾಲಕ್ಕಿಂತ ಹೆಚ್ಚು ಸುರಕ್ಷಿತ, ಹೆಚ್ಚಾಗಿ ಜನರು ಇಷ್ಟಪಡುವ ಕಾಲ. ಏಕೆಂದರೆ ಹೊರಗಡೆ ಹಗಲಿನಲ್ಲಿ ಬಿಸಿಗಾಳಿ ಇದ್ದರೂ ಸಂಜೆ ಆಗುತ್ತಿದ್ದಂತೆ ತಣ್ಣನೆಯ ಗಾಳಿ ಮನಕ್ಕೆ ಮುದ ನೀಡುತ್ತೆ. ಹೀಗಾಗಿ ಚಳಿಗಾಲದಲ್ಲಿ ಅನಾರೋಗ್ಯ ಸಮಸ್ಯೆಗಳು ಕಾಡುವುದು ಸ್ವಲ್ಪ ಕಡಿಮೆ ಎನ್ನಬಹುದು.
ಆದ್ರೆ ಚಳಿಗಾಲ ಅಂದಾಕ್ಷಣ ನಮಗೆ ಕಾಡುವುದು ನಮ್ಮ ತ್ವಚೆಯ ಆರೈಕೆ. ಹೌದು ಚಳಿಗಾಲದಲ್ಲಿ ನಮ್ಮ ಚರ್ಮಕ್ಕೆ ಆಗುವ ಹಾನಿ ಅಷ್ಟಿಷ್ಟಲ್ಲ. ವಾತಾವರಣದಲ್ಲಿ ತೇವಾಂಶ ಕಡಿಮೆಯಾಗುವ ಕಾರಣ ಚರ್ಮ ಒಣಗುವುದು, ಬಿರುಕು ಬಿಡುವುದು ಉಂಟಾಗುತ್ತದೆ. ಇದರಿಂದ ನಮ್ಮ ಚರ್ಮದ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ.ಹಾಗೆ ನಾವು ಹೊರಗಡೆ ಹೋದಾಗ ಅಥವಾ ಚಳಿಗಾಳಿಗೆ ಮೈ ಒಡ್ಡಿದಾಗ ಚರ್ಮದ ಹೊರಪದರ ಒಣಗಿ ಪೊರೆಯಂತೆ ಸಿಪ್ಪೆಯೇಳಲು ತೊಡಗಬಹುದು. ಒಂದು ವೇಳೆ ಯಾವುದೇ ವ್ಯಕ್ತಿಯಲ್ಲಿ ಒಣಗಿದ ಚರ್ಮ ಕಾಣಿಸಿಕೊಂಡರೆ ಆ ವ್ಯಕ್ತಿಗೆ ಚಳಿಗಾಲದಲ್ಲಿ ತ್ವಚೆಯ ಆರೈಕೆಯ ಬಗ್ಗೆ ಅರಿವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಚಳಿಗಾಲದಲ್ಲಿ ತ್ವಚೆಯ ಆರೈಕೆ ಹೇಗಿರಬೇಕು ಎಂಬುದನ್ನು ನಾವು ಬ್ಯೂಟಿಷಿಯನ್ ಜೊತೆಗೆ ಚರ್ಚಿ ಅವರು ಹೇಳಿರುವ ಒಂದಿಷ್ಟು ಅಂಶವನ್ನು ಇಲ್ಲಿ ನೀಡಲಾಗಿದೆ. ಬ್ಯೂಟಿಷಿಯನ್ ಆಗಿರುವ ಶೋಬಾ ಎನ್.ಡಿ ಅವರು ತಮ್ಮ ಬ್ಯೂಟಿ ಪಾರ್ಲರ್‌ಗೆ ಆಗಮಿಸು ಬಹುತೇಕ ಮಂದಿ ಚಳಿಗಾಲದಲ್ಲಿ ಚರ್ಮ ಒಣಗುವುದು, ಬಹುಬೇಗ ತುಟಿಗಳು ಸೀಳುವುದು ಇಂತಹ ಸಮಸ್ಯೆಗಳ ಹೊತ್ತು ತರುತ್ತಾರೆ ಎಂಬುದನ್ನು ಹಂಚಿಕೊಂಡಿದ್ದಾರೆ. ಹಾಗಾದ್ರೆ ಚಳಿಗಾಲದಲ್ಲಿ ಚರ್ಮದ ಆರೈಕೆ ಹೇಗೆ ಮಾಡಬೇಕು ಎಂಬುದನ್ನು ಅವರು ಹೇಳಿದಂತೆ ವಿವರಿಸಲಾಗಿದೆ ನೋಡಿ.
ಸಿಕ್ಕ ಸಿಕ್ಕ ಕ್ರೀಮ್ ಬಳಸಬಾರದು
ಒಬ್ಬೊಬ್ಬರ ಚರ್ಮ ಒಂದೊಂದು ರೀತಿ ಇರುತ್ತೆ. ಅದರಲ್ಲೂ ನಮ್ಮ ಚರ್ಮದ ಪಿಹೆಚ್ ಲೆವೆಲ್‌ಗೆ ಸೂಕ್ತವಾದ ಕ್ರೀಮ್ ಅನ್ನು ಬಳಸಬೇಕು. ತೀರ ಕಪ್ಪು ಚರ್ಮ ಹೊಂದಿದ್ದರೆ ಅಥವಾ ಬಿಳಿ ಚರ್ಮ ಹಾಗೆ ಅವರ ಚರ್ಮದ ಲಕ್ಷಣಕ್ಕೆ ಅನುಗುಣವಾಗಿ ಕ್ರೀಮ್‌ಗಳ ಬಳಕೆ ಮಾಡುವುದ ಬಹಳ ಮುಖ್ಯವಾಗುತ್ತದೆ. ಅವರು ಸಿಕ್ಕ ಸಿಕ್ಕ ಕ್ರೀಮ್ ಅನ್ನು ಚಳಿಗಾಲದ ದೃಷ್ಟಿಯಲ್ಲಿ ಬಳಸುವುದು ಸೂಕ್ತವಲ್ಲ. ಹೆಚ್ಚಾಗಿ ಸೌಮ್ಯವಾದ ಎಣ್ಣೆ, ವ್ಯಾಸಲಿನ್‌ನಂತಹ ವಸ್ತುವನ್ನು ಹಚ್ಚಿಕೊಳ್ಳುವುದು ತುಂಬಾನೆ ಒಳ್ಳೆಯದು.
ಚಳಿಗಾಲದಲ್ಲಿ ಹೆಚ್ಚು ಮುಖ ತೊಳೆಯಬೇಡಿ
ಚಳಿಗಾಲದಲ್ಲಿ ತೇವಾಂಶ ಕಾಪಾಡಲು ಅಥವಾ ಚರ್ಮ ಒಣಗದಂತೆ ಕಾಪಾಡಲು ಕೆಲವರು ನೀರಿನಿಂದ ಆಗಾಗ ಮುಖ ಕೈ ಕಾಲು ತೊಳೆಯುತ್ತಿರುತ್ತಾರೆ. ಆದ್ರೆ ಈ ರೀತಿ ಮಾಡಬಾರದು. ಅದು ಚರ್ಮದ ಮೇಲಿನ ತೇವವನ್ನು ಒಣಗುವಂತೆ ಮಾಡುತ್ತದೆ.
ಮಾಸ್ಕ್ ಇಲ್ಲವೆ ಬಟ್ಟೆ ಬಳಸುವುದು
ಮನೆಯಿಂದ ಹೊರಬರುವಾಗ ಮಾಸ್ಕ್ ಇಲ್ಲವೆ ಬಟ್ಟೆಯನ್ನು ಮುಖಕ್ಕೆ ಕಟ್ಟಿಕೊಂಡರೆ ಉತ್ತಮ. ಒಣಗಾಳಿ ಮುಖದ ಮೇಲೆ ಬಿದ್ದಾಗ ತ್ವಚೆ ಬೇಗ ಒಣಗುತ್ತದೆ, ಇದರಿಂದ ಚರ್ಮಕ್ಕೆ ಹಾನಿಯಾಗುತ್ತೆ. ಹಾಗೆ ಮನೆಗೆ ತೆರಳಿದಾಗ ಒಮ್ಮೆ ಉಗುರು ಬೆಚ್ಚಗಿನ ನೀರಿನಿಂದ ತೊಳೆದು ವ್ಯಾಸಲಿನ್ ಅಥವಾ ಯಾವುದಾದರು ಮೋಯಿಶ್ಚರೈಸರ್ ಬಳಸುವುದು ಉತ್ತಮ.
ಮಿಸ್ಟ್, ಸೀರಂ ಅಥವಾ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ
ಗಾಳಿಯಲ್ಲಿ ತೇವಾಂಶ ಇಲ್ಲದ ಕಾರಣಕ್ಕೆ ಚರ್ಮ ಒಣಗುತ್ತದೆ. ಅದರಲ್ಲೂ ನಮ್ಮ ಮುಖ ಬಹುಬೇಗ ಈ ಗಾಳಿಗೆ ತೆರೆದುಕೊಳ್ಳುವುದರಿಂದ ಒಣಗುತ್ತದೆ. ಹೀಗಾಗಿ ಮಿಸ್ಟ್, ಸೀರಂ, ಮಾಯಿಶ್ಚರೈಸರ್ ಹಚ್ಚಿಕೊಳ್ಳಬೇಕು. ಹುಮೆಕ್ಟಂಟ್, ಎಮೋಲಿಯೆಂಟ್‌ಗಳ ಬಳಕೆ ಮಾಡುವುದು ಕೂಡ ಉತ್ತಮ ಅಭ್ಯಾಸ.