ಪೆರ್ಲ: ಕುಂಬಳೆ ಉಪಜಿಲ್ಲಾ ಮಟ್ಟದ 63ನೇ ಶಾಲಾ ಕಲೋತ್ಸವ ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸೋಮವಾರ ಬೆಳಗ್ಗಿನಿಂದ ಆರಂಭಗೊಂಡಿದೆ. ಸೋಮವಾರ ಹಾಗೂ ಮಂಗಳವಾರ ವೇದಿಕೆಯೇತರ ಸ್ಪರ್ಧೆಗಳು ಜರಗುತ್ತಿವೆ. ಶ್ರೀ ಶಾರದಾಂಬಾ ವಿದ್ಯಾಸಂಸ್ಥೆಯ ಪ್ರಬಂಧಕಿ ಶಾರದಾ ವೈ ಧ್ವಜಾರೋಹಣಗೈದರು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಶಶಿಧರ, ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರನಾಥ ನಾಯಕ್, ಕಲೋತ್ಸವ ಪ್ರಧಾನ ಸಂಚಾಲಕ ಶಾಸ್ತಾ ಕುಮಾರ್, ಸಹ ಸಂಚಾಲಕ ಶ್ರೀಶ ಕುಮಾರ್, ಯುಪಿ ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ನಾಯಕ್ ಶೇಣಿ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮುಕ್ತಾರ್ ಅಲಿ, ಪಿಟಿಎ ಅಧ್ಯಕ್ಷ ವಿನ್ಸಂಟ್ ಡಿಸೋಜ, ಪಿಟಿಎ ಪದಾಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.ಶ್ಯಾಮ್ ಪ್ರಸಾದ್ ನಿರೂಪಿಸಿದರು.
ಕಲೋತ್ಸವದ ಉಪಯೋಗಕ್ಕೆ ಮುಳ್ಳೇರಿಯ ಶಾಲಾ ಸಾವಿತ್ರಿ ಟೀಚರ್ ಮತ್ತು ಮಕ್ಕಳು ತಯಾರಿಸಿದ ಬಟ್ಟೆಯ ಕೈ ಚೀಲವನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ವೇದಿಕೆಯೇತರ ಸ್ಪರ್ಧೆಗಳಲ್ಲಿ ಸುಮಾರು 2000ದಷ್ಟು ಸ್ಪರ್ಧಾಳುಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಈ ಐತಿಹಾಸಿಕ ನೆಲದಲ್ಲಿ ನಡೆಯಲಿರುವ 5 ದಿನಗಳ ಕಲೋತ್ಸವದಲ್ಲಿ ಉಪಜಿಲ್ಲೆಯ 93 ಶಾಲೆಗಳ ಸುಮಾರು 7000 ಕ್ಕೂ ಹೆಚ್ಚು ವಿದ್ಯಾರ್ಥಿಗಳು 16 ವೇದಿಕೆಗಳಲ್ಲಿ 350ಕ್ಕೂ ಹೆಚ್ಚು ಪ್ರಕಾರಗಳಲ್ಲಿ ಪ್ರತಿಭಾ ಪ್ರದರ್ಶನವನ್ನು ನೀಡಲಿದ್ದಾರೆ.