ಕುಂಬಳೆ:ಮುಕ್ತಕಗಳಿಗೆ ಕನ್ನಡ ಸಾಹಿತ್ಯದಲ್ಲಿ ಪ್ರಾಚೀನ ಇತಿಹಾಸವಿದೆ. ಯಾವುದೇ ಮುಕ್ತತೆಯ, ಬಿಡಿಬಿಡಿಯಾದ ಕಾವ್ಯ ಮುಕ್ತಕವೆನಿಸುತ್ತದೆ. ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತೆ ಸಲಹೆ ಸೂಚನೆಗಳ ರೂಪದಲ್ಲಿ ಗೇಯದೊಂದಿಗೆ ಮುಕ್ತಕಗಳು ಗಮನಾರ್ಹವೆನಿಸುತ್ತದೆ ಎಂದು ಮದುರೈ ಕಾಮರಾಜ ವಿ.ವಿ.ಯ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ಹರಿಕೃಷ್ಣ ಭರಣ್ಯ ಅಭಿಪ್ರಾಯಪಟ್ಟರು.
ಅವರು ಹಿರಿಯ ಸಾಹಿತಿ, ಕವಿ, ಶಿಕ್ಷಣ ತಜ್ಞ ವಿ.ಬಿ. ಕುಳಮರ್ವ ಅವರ ಮುಕ್ತಕಗಳ ಸಂಕಲನ 'ಕಂದನ ಮುತ್ತು' ಸಂಕನವನ್ನು ಭಾನುವಾರ ಕುಂಬಳೆ ಸಮೀಪದ ನಾರಾಯಣಮಂಗಲದಲ್ಲಿರುವ ಅವರ ನಿವಾಸದಲ್ಲಿ ನಡೆದ ಸರಳ ಸುಂದರ ಕಾರ್ಯಕ್ರಮದಲ್ಲಿ ಅವರು ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಸಂಸ್ಕøತ ಸಾಹಿತ್ಯದಲ್ಲಿ ಸುಭಾಷಿತಗಳೆÉಂದು ಕರೆಯಲ್ಪಡುವ ಇಂತಹ ಪ್ರಕಾರ ಹೆಚ್ಚಿನ ಭಾಷೆಗಳಲ್ಲೂ ಧಾರಾಳವಾಗಿದೆ. ಬದುಕಿನ ಸೌಂದರ್ಯ ಚಿಂತನೆ, ನೀತಿಗಳನ್ನು ಇಂತಹ ಕೃತಿಗಳು ನೀಡುವಲ್ಲಿ ಯಶಸ್ವಿಯಾಗುತ್ತಿದ್ದು, ಬದುಕಿನ ಅನುಭವಗಳು ಮುಕ್ತಕಗಳಾಗಿ ಅಕ್ಷರ ರೂಪ ಪಡೆಯುತ್ತದೆ ಎಂದರು.
ಸಿರಿಗನ್ನಡ ವೇದಿಕೆಯ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಜರಗಿದ ಈ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ವಾಂಸ, ನಿವೃತ್ತ ಶಿಕ್ಷಕ, ಬಳ್ಳಂಬೆಟ್ಟು ಈಶ್ವರ ಭಟ್ ಅತಿಥಿಗಳಾಗಿ ಶುಭ ಹಾರೈಸಿದರು.
ಎಣ್ಮಕಜೆ ಗ್ರಾಮ ಪಂಚಾಯತಿ ಸದಸ್ಯೆ ಆಯಿಶಾ ಎ.ಎ. ಪೆರ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಕೃತಿಕಾರರು ಮತ್ತು ಕೃತಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಕೃತಿಯನ್ನು ಪ್ರಕಟಿಸಿದ ಮಂಗಳೂರಿನ ಕಥಾಬಿಂದು ಪ್ರಕಾಶನದ ಪಿ.ವಿ. ಪ್ರದೀಪ್ ಕುಮಾರ್ (ಲೇಖಕ, ಪ್ರಕಾಶಕ) ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೃತಿಕಾರರಾದ ವಿ.ಬಿ ಕುಳಮರ್ವ ಅವರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.. 10,000ಕ್ಕೂ ಅಧಿಕ ಮುಕ್ತಕಗಳು ಇದುವರೆಗೆ ರಚನೆಯಾಗಿದ್ದು, ಮೊದಲ ಹಂತದಲ್ಲಿ 1000 ಮುಕ್ತಕಗಳನ್ನು ಒಳಗೊಂಡ ಸಂಕಲನ 'ಕಂದನ ಮುತ್ತು' ಬಿಡುಗಡೆಯಾಗುತ್ತಿದೆ ಎಂದು ತಿಳಿಸಿದರು.
ಕವಿ, ಸಾಹಿತಿ, ರಾಧಾಕೃಷ್ಣ ಕೆ. ಉಳಿಯತ್ತಡ್ಕ ಶುಭಾಶಂಸನೆಗೈದರು. ಬೆಳ್ತಂಗಡಿ ನಡ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕಿ ವಸಂತಿ ಜಿ. ಭಟ್ ಕುಳಮರ್ವ ಅವರು ಕಾರ್ಯಕ್ರಮ ನಿರೂಪಿಸಿದರು. ಕಾಸರಗೋಡಿನ ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ಲಲಿತಾ ಲಕ್ಷ್ಮಿ ಕುಳಮರ್ವ ಅವರು ವಂದಿಸಿದರು.
ಪುಸ್ತಕ ಬಿಡುಗಡೆಯ ಬಳಿಕ ಕೃತಿಯಿಂದ ಆಯ್ದ ಕೆಲವು ಮುಕ್ತಕಗಳ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು. ನಿವೃತ್ತ ಪ್ರಾಂಶುಪಾಲ ಉಂಡೆಮನೆ ವಿಶ್ವೇಶ್ವರ ಭಟ್ ಹಾಗೂ ಪ್ರೊ.. ಗಣಪತಿ ಭಟ್ ಕುಳಮರ್ವ ಅವರು ವಾಚನ-ವ್ಯಾಖ್ಯಾನ ನಡೆಸಿದರು. ಬಳಿಕ ಕೊಳಚಿಪ್ಪು ಗೋವಿಂದ ಭಟ್ಟರ ಅಧ್ಯಕ್ಷತೆಯಲ್ಲಿ ಕಿರು ಕವಿಗೋಷ್ಠಿ ನಡೆಯಿತು.