ಮೆಕ್ಸಿಕೊ ನಗರ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು, ಜಾಗತಿಕ ಮಟ್ಟದಲ್ಲಿ ಲಕ್ಷಾಂತರ ವಲಸಿಗರು ಅಥವಾ ಸಂಭಾವ್ಯ ವಲಸಿಗರಲ್ಲಿ ಆತಂಕವನ್ನುಂಟು ಮಾಡಿದೆ.
ವಲಸೆಯನ್ನು ನಿಯಂತ್ರಿಸುವುದಾಗಿ ಟ್ರಂಪ್ ಈ ಹಿಂದೆ ಪ್ರತಿಜ್ಞೆ ಮಾಡಿದ್ದರು. ಇದೀಗ ಅವರು ಅಧಿಕಾರಕ್ಕೆ ಏರಿರುವ ಕಾರಣ ವಲಸಿಗರು ತಮ್ಮ ಯೋಜನೆಗಳನ್ನು ಬದಲಾಯಿಸುತ್ತಿದ್ದು, ವಲಸಿಗರ ಕಳ್ಳಸಾಗಾಣಿಕೆ ಹೆಚ್ಚಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹಲವು ಪ್ರಕರಣಗಳಲ್ಲಿ ಸಂಘಟಿತ ಗುಂಪುಗಳು ವಲಸಿಗರ ಕಳ್ಳಸಾಗಾಣಿಕೆ ಮೂಲಕ ಲಾಭ ಮಾಡಿಕೊಳ್ಳುತ್ತವೆ. ಟ್ರಂಪ್ ಆಯ್ಕೆ ಬೇರೆ ದೇಶಗಳಿಂದ ಅಮೆರಿಕಕ್ಕೆ ಬಂದಿರುವವರ ಮೇಲೆ ಪ್ರಭಾವ ಬೀರಿದ್ದು, ಹಲವು ಜನ ತಮ್ಮ ಮನೆಗಳನ್ನು ಮಾರಿ ಪ್ರವಾಸಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಟ್ರಂಪ್ ಅವರ ಈ ಹಿಂದಿನ ಆಡಳಿತ ಅವಧಿಯಲ್ಲಿ ಮೆಕ್ಸಿಕೊ ಗಡಿ ಭಾಗದ ನಗರಗಳಲ್ಲಿ ವಲಸಿಗರ ಸಂಖ್ಯೆ ಅಧಿಕವಾಗಿತ್ತು. ಕೆಲವು ಗುಂಪುಗಳು ಅವರನ್ನು ಸುಲಿಗೆ ಮಾಡುವುದು, ಅಪಹರಣ ಮಾಡುವುದು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುತ್ತಿದ್ದವು. ಪ್ರತಿನಿತ್ಯ ನೂರಾರು ಜನರು ವಲಸೆ ಬರುತ್ತಿದ್ದರು ಮತ್ತು ಅಮೆರಿಕದ ಪೌರತ್ವ ಪಡೆಯಲು ಹಲವಾರು ವರ್ಷಗಳಿಂದ ಕಾಯುತ್ತಿದ್ದರು.
2023ರಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಸಿಬಿಪಿ ಎಂಬ ಯೋಜನೆ ಮೂಲಕ ವಲಸಿಗರಿಗೆ ಕೆಲವು ಅನುಕೂಲಗಳನ್ನು ಮಾಡಿಕೊಟ್ಟಿದ್ದರು. ಇದರಿಂದಾಗಿ ಗಡಿಭಾಗದಲ್ಲಿದ್ದವರು ಕಾನೂನಿನ ಅಡಿಯಲ್ಲಿ ಅಮೆರಿಕದೊಳಗೆ ಪ್ರವೇಶಿಸಲು ಪ್ರಯತ್ನಿಸಿದರು.
ಸಿಬಿಪಿಯನ್ನು ಕೊನೆಗೊಳಿಸುವ ಯೋಚನೆಯನ್ನು ಟ್ರಂಪ್ ಹೊಂದಿದ್ದು, ನಿರಾಶ್ರಿತರ ಪುನರ್ವಸತಿಗೆ ನಿರ್ಬಂಧ ಹೇರುವ ಮತ್ತು ಸಾಮೂಹಿಕ ಗಡಿಪಾರು ಮಾಡುವ ಸಾಧ್ಯತೆಗಳಿವೆ.
ಸಾಮೂಹಿಕ ಗಡಿಪಾರಿನ ಬಗ್ಗೆ ಟ್ರಂಪ್ ಈ ಹಿಂದೆಯೂ ಎಚ್ಚರಿಕೆ ನೀಡಿದ್ದರು ಆದರೆ ಅದನ್ನು ಕಾರ್ಯಗತಗೊಳಿಸಿರಲಿಲ್ಲ ಆದರೆ ಈ ಬಾರಿ ಈ ಬಗ್ಗೆ ಗಮನಹರಿಸುವ ಸಾಧ್ಯತೆ ಹೆಚ್ಚಿದೆ.
ಟ್ರಂಪ್ ಅವರ ವಲಸಿಗರ ನೀತಿಯಿಂದ, ವಲಸಿಗರು ರೋಸಿ ಹೋಗಿದ್ದರು. ಈಗ ಮತ್ತೆ ಅದು ಮರುಕಳಿಸುತ್ತದೆ. ವಲಸಿಗರ ಕಳ್ಳಸಾಗಣೆಯ ಆದಾಯವು ಮಾದಕ ವಸ್ತುಗಳ ಜಾಲದ ಅದಾಯಕ್ಕಿಂತ ಹೆಚ್ಚಾಗಿರುವುದರಿಂದ ಯೋಜಿತ ಅಪರಾಧಗಳು ಹೆಚ್ಚಾಗುತ್ತವೆ ಎಂದು ಅಮೆರಿಕದಲಿದ್ದ ಮೆಕ್ಸಿಕೊದ ಮಾಜಿ ರಾಯಭಾರಿ ಮಾರ್ಥ ಬರ್ಸೇನಾ ಅವರು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ವಲಸಿಗರ ಸಮಿತಿಯ ಪ್ರಕಾರ ವಿಶ್ವದಲ್ಲಿ 28.1 ಕೋಟಿ ವಲಸಿಗರಿದ್ದಾರೆ. ಅಂದರೆ ಜಾಗತಿಕ ಜನಸಂಖ್ಯೆಯ ಶೇ 3.6 ರಷ್ಟು ವಲಸಿಗರಿದ್ದಾರೆ.