ಪ್ಯಾರಿಸ್: ಹುಲಿ ಮತ್ತು ಆನೆಗಳಂತಹ ವನ್ಯಜೀವಿಗಳ ಮೇಲೆ ನಿಗಾ ಇಡಲು ಬಳಸಬೇಕಾದ ಕ್ಯಾಮೆರಾ ಟ್ರ್ಯಾಪ್‌ಗಳು, ಡ್ರೋನ್‌ಗಳು ಮತ್ತು ಇತರ ತಂತ್ರಜ್ಞಾನಗಳನ್ನು ಇತ್ತೀಚೆಗೆ ಭಾರತದಲ್ಲಿ ಮಹಿಳೆಯರನ್ನು ಬೆದರಿಸಲು, ಕಿರುಕುಳ ನೀಡಲು ಮತ್ತು ಅವರ ಚಲನವಲನ ಚಟುವಟಿಕೆಗಳ ಮೇಲೆ ನಿಗಾ ಇಡಲು ಬಳಸಲಾಗುತ್ತಿದೆ ಎಂದು ಸಂಶೋಧಕರು ಹೇಳುತ್ತಾರೆ.
ಇದಕ್ಕೆ ಒಂದು ನಿರ್ದಿಷ್ಟ ಉದಾಹರಣೆ ಎಂಬಂತೆ, ಕಾಡಿನಲ್ಲಿ ಮಹಿಳೆಯೊಬ್ಬರು ಖಾಸಗಿಯಾಗಿ ವಿಶ್ರಾಂತಿ ಪಡೆಯುತ್ತಿರುವ ಕ್ಷಣದ ಫೋಟೋವನ್ನು ಸ್ಥಳೀಯ ಪುರುಷರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು ಕಂಡು ಗ್ರಾಮಸ್ಥರು ಹತ್ತಿರದ ಕ್ಯಾಮರಾ ಟ್ರ್ಯಾಪ್ ಗಳನ್ನು ನಾಶಪಡಿಸಿದರು.
ಯುಕೆಯ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕ ತ್ರಿಶಾಂತ್ ಸಿಮ್ಲೈ ಅವರು ಉತ್ತರ ಭಾರತದ ಕಾರ್ಬೆಟ್ ಮೀಸಲು ಹುಲಿ ಅಭಯಾರಣ್ಯ ಬಳಿ ವಾಸಿಸುವ ಸುಮಾರು 270 ಜನರನ್ನು ಸಂದರ್ಶಿಸಲು 14 ತಿಂಗಳುಗಳನ್ನು ಕಳೆದರು.
ಮೀಸಲು ಪ್ರದೇಶದ ಸುತ್ತಲಿನ ಹಳ್ಳಿಗಳಲ್ಲಿ ವಾಸಿಸುವ ಮಹಿಳೆಯರಿಗೆ ಬಹಳ ಹಿಂದಿನಿಂದಲೂ ಅರಣ್ಯವು "ಹೆಚ್ಚು ಸಂಪ್ರದಾಯವಾದಿ ಮತ್ತು ಪಿತೃಪ್ರಭುತ್ವದ ಸಮಾಜದಲ್ಲಿ" ಪುರುಷರಿಂದ "ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ" ಗಾಗಿ ಇರುವ ಒಂದು ಸ್ಥಳವಾಗಿದೆ ಎಂದು ಸಿಮ್ಲೈ AFP ಸುದ್ದಿಸಂಸ್ಥೆಗೆ ಹೇಳುತ್ತಾರೆ.
ಅರಣ್ಯದಲ್ಲಿ ಮಹಿಳೆಯರು ಮೈಮರೆಯುತ್ತಾ ಹಾಡುತ್ತಾರೆ, ಲೈಂಗಿಕತೆಯಂತಹ ನಿಷೇಧಿತ ವಿಷಯಗಳ ಬಗ್ಗೆ ಮಾತನಾಡುತ್ತಾರೆ ಮತ್ತು ಕೆಲವೊಮ್ಮೆ ಕಾಡಿನಲ್ಲಿ ಉರುವಲು ಮತ್ತು ಹುಲ್ಲು ಸಂಗ್ರಹಿಸುವಾಗ ಮದ್ಯಪಾನ, ಧೂಮಪಾನ ಮಾಡುತ್ತಾರೆ. ಆದರೆ ಹುಲಿಗಳು ಮತ್ತು ಇತರ ವನ್ಯಜೀವಿಗಳನ್ನು ಪತ್ತೆಹಚ್ಚುವ ಮತ್ತು ರಕ್ಷಿಸುವ ಪ್ರಯತ್ನಗಳ ಭಾಗವಾಗಿ ಕ್ಯಾಮೆರಾ ಟ್ರ್ಯಾಪ್‌ಗಳು, ಡ್ರೋನ್‌ಗಳು ಮತ್ತು ಧ್ವನಿ ರೆಕಾರ್ಡರ್‌ಗಳ ಪರಿಚಯವು "ಸಮಾಜದ ಪುರುಷರ ಕುತೂಹಲದ ಚಿತ್ತವನ್ನು ಕಾಡಿನತ್ತ ಮುಖ ಮಾಡುವಂತೆ ಮಾಡಿದೆ ಎಂದು ಸಿಮ್ಲೈ ಹೇಳಿದರು.
ಎನ್ವಿರಾನ್‌ಮೆಂಟ್ ಅಂಡ್ ಪ್ಲಾನಿಂಗ್ ಜರ್ನಲ್‌ನಲ್ಲಿ ಸಿಮ್ಲೈ ನೇತೃತ್ವದ ಅಧ್ಯಯನದ ಪ್ರಕಾರ, ಅನೇಕ ಸಂದರ್ಭಗಳಲ್ಲಿ, ಡ್ರೋನ್‌ಗಳನ್ನು ಉದ್ದೇಶಪೂರ್ವಕವಾಗಿ ಮಹಿಳೆಯರ ತಲೆಯ ಮೇಲೆ ಹಾರಿಸಲಾಗುತ್ತದೆ. ಇದರಿಂದ ಉರುವಲು ಸಂಗ್ರಹಕ್ಕೆ ಬರುವ ಮಹಿಳೆಯರು ತಮ್ಮ ರಕ್ಷಣೆ ಬಗ್ಗೆ ಭೀತರಾಗಿದ್ದಾರೆ.