ಬದಿಯಡ್ಕ: ಕುಂಬ್ಡಾಜೆ ಗ್ರಾಮ ಸೇವಾಸಂಘ ಗ್ರಂಥಾಲಯದ ಆಶ್ರಯದಲ್ಲಿ ಏತಡ್ಕದ ಗಣಪತಿ ನಿಲಯದಲ್ಲಿ ದಿ. ಡಾ. ವೈ ಕೆ ಕೇಶವ ಭಟ್ಟರ ಸಂಸ್ಮರಣಾ ಕಾರ್ಯಕ್ರಮ ಶನಿವಾರ ಜರಗಿತು. ಏತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯ ಸುಬ್ರಹ್ಮಣ್ಯ ಭಟ್ ಕೆ ಉದ್ಘಾಟಿಸಿ ಮಾತನಾಡಿ, ಕುಗ್ರಾಮವಾಗಿದ್ದ ಏತಡ್ಕವನ್ನು ಸುಗ್ರಾಮವನ್ನಾಗಿಸಿದ ಕೀರ್ತಿ ಡಾ ವೈ ಕೆ ಕೇಶವ ಭಟ್ಟರಿಗೆ ಸಲ್ಲುತ್ತದೆ. ಹತ್ತಿರವೆಲ್ಲೂ ಚಿಕಿತ್ಸಾಲಯಗಳಿಲ್ಲದ ಆ ಕಾಲಘಟ್ಟದಲ್ಲಿ ಅವರು ಏತಡ್ಕ ಪರಿಸರದ ಆಶಾಕಿರಣವಾಗಿದ್ದರು. ಓರ್ವ ಸಮಾಜ ಸೇವಕನಾಗಿ ಪ್ರತಿಯೊಬ್ಬನಿಗೂ ದಾರಿ ದೀಪವಾಗಿದ್ದರು ಎಂದರು.
ಗ್ರಂಥಾಲಯದ ಅಧ್ಯಕ್ಷ ವೈ ಕೆ ಗಣಪತಿ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ತನ್ನ ಬೆಳವಣಿಗೆಗೆ ಶ್ರೀಯುತರು ಕಾರಣೀಭೂತರು ಎಂದು ತನ್ನ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು. ಕುಂಬ್ಡಾಜೆ ಗ್ರಾಮ ಪಂಚಾಯತಿ ಸದಸ್ಯ ಕೃಷ್ಣ ಶರ್ಮ ಜಿ ಮಾತನಾಡಿ, ತಮಗೆ ಸಭೆಯ ಮುಂಭಾಗದಲ್ಲಿ ಯಾವ ರೀತಿ ಮಾತನಾಡಬೇಕು ಎಂಬುದನ್ನು ತಿಳಿಸಿಕೊಟ್ಟು ರಾಜಕೀಯದ ಹಾದಿಗೆ ಸೆಳೆದ ಮಹಾನ್ ಚೇತನ ಅವರಾಗಿದ್ದರು. ಬಾಲ್ಯದಿಂದ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ನಂತರ ಜೀವನವನ್ನು ಸಮಾಜಕ್ಕಾಗಿ ಧಾರೆ ಎರೆದಂತಹ ಮಹಾನ್ ವ್ಯಕ್ತಿ. ಇಂದಿಗೆ ಇಪ್ಪತ್ತೇಳು ವರ್ಷ ಕಳೆದ ಮೇಲೂ ಅವರ ಕುರಿತಾಗಿ ಸಂಸ್ಮರಣೆ ಮಾಡಬೇಕಾದದರೆ ಅವರ ವ್ಯಕ್ತಿತ್ವ ಏನಿತ್ತು ಎಂಬುದು ನಮಗೆ ಮನವರಿಕೆಯಾಗುತ್ತದೆ ಎಂದರು.
ಗ್ರಂಥಾಲಯ ಪಂಚಾಯಿತಿ ಸಮಿತಿ ಕನ್ವೀನರ್ ಅಶ್ರಫ್ ಬೆಳಿಂಜ ಮಾತನಾಡಿ ಹಿರಿಯರ ಆದರ್ಶಗಳನ್ನು ಹೊಸ ತಲೆಮಾರಿಗೆ ನೆನಪಿಸುವಂತಹ ಕಾರ್ಯ ಶ್ಲಾಘನೀಯ ಎಂದರು. ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಮೊಕ್ತೇಸಸರು ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವೈ. ಶ್ಯಾಮ ಭಟ್ ಮಾತನಾಡಿದರು. ಇದೇ ಸಂದರ್ಭದಲ್ಲಿ ನರಸಿಂಹ ಭಟ್ ಕಟ್ಟದಮೂಲೆ ಡಾ ವೈ.ಕೆ ಕೇಶವ ಭಟ್ಟರ ಕುರಿತು ರಚಿಸಿದ ಮುಕ್ತಕವನ್ನು ವಾಚಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದವರಲ್ಲಿ ಚಂದ್ರಶೇಖರ ಏತಡ್ಕ, ಡಾ. ಮೋಹನ್ ಕುಮಾರ್, ಸುಬ್ರಹ್ಮಣ್ಯ ವೈ ವಿ., ಮುಂತಾದವರು ಡಾ ವೈ. ಕೆ ಕೇಶವ ಭಟ್ಟರ ಕುರಿತು ನುಡಿನಮನ ಸಲ್ಲಿಸಿ ಮಾತನಾಡಿದರು. ಶಶಿಪ್ರಭಾ ವರುಂಬುಡಿ ಪ್ರಾರ್ಥಿಸಿದರು. ಗ್ರಂಥಾಲಯದ ಕಾರ್ಯದರ್ಶಿ ಗಣರಾಜ ಕೆ ಸ್ವಾಗತಿಸಿ, ಡಾ ವೇಣುಗೋಪಾಲ್ ಕೆ ವಂದಿಸಿದರು.