ತಿರುವನಂತಪುರಂ : ಮೆಪ್ಪಾಡಿ ಗ್ರಾಮ ಪಂಚಾಯತಿಯು ವಯನಾಡ್ ಜಿಲ್ಲೆಯ ಚೂರಲ್ಮಲ-ಮುಂಡಕ್ಕೈ ಗ್ರಾಮಗಳಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಬದುಕುಳಿದಿರುವವರಿಗೆ ಕಳಪೆ ಗುಣಮಟ್ಟದ ಆಹಾರ ಪೊಟ್ಟಣಗಳನ್ನು ವಿತರಿಸುತ್ತಿದೆ ಎಂಬ ಆರೋಪದ ಕುರಿತು ಶುಕ್ರವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತನಿಖೆಗೆ ಆದೇಶಿಸಿದ್ದಾರೆ.
ಆಹಾರ ಪೊಟ್ಟಣಗಳ ಕುರಿತ ಮಾಧ್ಯಮ ವರದಿಗಳನ್ನು ಆಧರಿಸಿ ಮುಖ್ಯಮಂತ್ರಿ ತನಿಖೆಗೆ ಆದೇಶಿಸಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಕುರಿತು ತಕ್ಷಣವೇ ವರದಿ ಸಲ್ಲಿಸಬೇಕು ಎಂದು ಪಿಣರಾಯಿ ವಿಜಯನ್ ಸೂಚಿಸಿದ್ದಾರೆ.
ಈ ಘಟನೆಯ ಕುರಿತು ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮುಖ್ಯಮಂತ್ರಿಗೆ ಸಲ್ಲಿಸಿದ ಟಿಪ್ಪಣಿಯನ್ನು ಆಧರಿಸಿ ಈ ತನಿಖೆಗೆ ಆದೇಶಿಸಲಾಗಿದೆ.
ಗ್ರಾಮ ಪಂಚಾಯಿತಿ ಏನಾದರೂ ಹಳೆಯ ದಾಸ್ತಾನನ್ನು ವಿತರಿಸಿದೆಯೆ ಅಥವಾ ಆಹಾರ ಪದಾರ್ಥಗಳ ಪೊಟ್ಟಣವನ್ನು ಯಾವುದೇ ಬಗೆಯಲ್ಲಾದರೂ ಒಡೆಯಲಾಗಿದೆಯೆ ಎಂಬ ಕುರಿತು ಈ ತನಿಖೆ ಪರಿಶೀಲಿಸಲಿದೆ. ಈಗಾಗಲೇ ಪ್ರಾಥಮಿಕ ತನಿಖೆ ನಡೆಸಲಾಗಿದೆ ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.
ವಯನಾಡ್ ಜಿಲ್ಲೆಯ ಚೂರಲ್ಮಲ-ಮುಂಡಕ್ಕೈನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಬದುಕುಳಿದಿರುವವರು ಮೆಪ್ಪಾಡಿ ಗ್ರಾಮ ಪಂಚಾಯತಿ ನಮಗೆ ಹುಳ ತುಂಬಿರುವ ಆಹಾರ ಪೊಟ್ಟಣಗಳನ್ನು ವಿತರಿಸಿದೆ ಎಂದು ಆರೋಪಿಸಿದ್ದರು. ಇದರ ಬೆನ್ನಿಗೇ ಈ ಸಂಬಂಧ ಡೆಮಾಕ್ರಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ ಗುರುವಾರ ಪ್ರತಿಭಟನೆ ನಡೆಸಿತ್ತು.
ಮೆಪ್ಪಾಡಿ ಪಂಚಾಯಿತಿಯ ಆಡಳಿತವನ್ನು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ನಡೆಸುತ್ತಿದೆ.