ಅಹಮದಾಬಾದ್: ಗುಜರಾತಿನ ಅಮ್ರೇಲಿ ಜಿಲ್ಲೆಯಲ್ಲಿ ಬಿಲ್ಡರ್ ಒಬ್ಬರು 18 ವರ್ಷಗಳಷ್ಟು ಹಳೆಯದಾದ ಕಾರನ್ನು ಸಮಾಧಿ ಮಾಡುವ ಮೂಲಕ 'ಬದುಕನ್ನೇ ಬದಲಾಯಿಸಿದ' ಪ್ರೀತಿಯ ವಾಹನಕ್ಕೆ ವಿನೂತನವಾಗಿ ವಿದಾಯ ಹೇಳಿದ್ದಾರೆ.
ಬಿಲ್ಡರ್ ಆಗಿರುವ ಸಂಜಯ್ ಪೊಲ್ರಾ ಎಂಬವರು ಲಠೀ ತಾಲ್ಲೂಕಿನ ಪದಾರ್‌ಶಿಂಗ ಗ್ರಾಮದಲ್ಲಿ ಗುರುವಾರ ಅದ್ದೂರಿಯಾಗಿ ಸಮಾಧಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಗ್ರಾಮಸ್ಥರು, ಅರ್ಚಕರು ಮತ್ತು ಧಾರ್ಮಿಕ ಮುಖಂಡರು ಸೇರಿದಂತೆ 1,500ಕ್ಕೂ ಹೆಚ್ಚು ಮಂದಿ ಇದರಲ್ಲಿ ಭಾಗವಹಿಸಿದ್ದರು.
ಆಸ್ತಿ ಮಾರಾಟ ದಲ್ಲಾಳಿಯಾಗಿದ್ದ ಸಂಜಯ್ ಅವರು ವೃತ್ತಿಯ ಆರಂಭದ ದಿನಗಳಲ್ಲಿ ಮಾರುತಿ ವಾಗನ್ -ಆರ್ ಕಾರು ಖರೀದಿಸಿದ್ದರು. ಈ ಕಾರಿನಿಂದಾಗಿ ತಮ್ಮ ಅದೃಷ್ಟದ ಬಾಗಿಲು ತೆರೆಯಿತು ಎಂದು ಅವರು ನಂಬಿದ್ದಾರೆ.
ಅದ್ದೂರಿ ಸಮಾರಂಭ: ಸಮಾಧಿ ಕಾರ್ಯಕ್ರಮಕ್ಕಾಗಿ ಕಾರನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಗ್ರಾಮಸ್ಥರು ಕಾರಿನ ಸುತ್ತ ಗರ್ಬಾ ನೃತ್ಯವನ್ನೂ ನಡೆಸಿದರು. ಅಲಂಕೃತ ಕಾರನ್ನು ಸಮಾಧಿ ಸ್ಥಳದವರೆಗೂ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ಸಂಜಯ್ ಅವರಿಗೆ ಸೇರಿದ ಕೃಷಿ ಜಮೀನಿನಲ್ಲಿ ಕಾರಿನ ಸಮಾಧಿಗಾಗಿ 15 ಅಡಿ ಆಳದ ಗುಂಡಿ ತೋಡಲಾಗಿತ್ತು. ಸಂಗೀತದ ಅಬ್ಬರ ಹಾಗೂ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಸಮಾಧಿ ಸ್ಥಳ ಹಾಗೂ ಕಾರಿಗೆ ಪೂಜೆಯನ್ನೂ ಸಲ್ಲಿಸಲಾಯಿತು. ಪೂಜೆಯ ನಂತರ ಮಂತ್ರ ಘೋಷಗಳ ನಡುವೆ ಕಾರನ್ನು ಹೂಳಲಾಯಿತು.
'2006ರಲ್ಲಿ ಕಾರನ್ನು ಖರೀದಿಸಿದ್ದೆ. ಅದು ನನ್ನ ಅದೃಷ್ಟವನ್ನೇ ಬದಲಾಯಿಸಿತ್ತು. ಅದನ್ನು ನಾನು ತುಂಬಾ ಪ್ರೀತಿಸುತ್ತಿದ್ದೆ. ಹಾಗಾಗಿ, ಬೇರೆ ಯಾವುದೇ ಯೋಚನೆ ಮಾಡದೆ ಅದನ್ನು ಸಮಾಧಿ ಮಾಡಿದ್ದೇನೆ' ಎಂದು ಸಂಜಯ್ ಪೋಲ್ರಾ 'ಪ್ರಜಾವಾಣಿ'ಗೆ ತಿಳಿಸಿದರು.
ಸೌರಾಷ್ಟ್ರ ಮೂಲದವರಾದ ಸಂಜಯ್ ಅವರು ಉತ್ತಮ ಅವಕಾಶ ಅರಸಿಕೊಂಡು ಸೂರತ್‌ಗೆ ವಲಸೆ ಹೋಗಿದ್ದರು. ಅಲ್ಲಿ ರಿಯಲ್ ಎಸ್ಟೇಟ್ ದಲ್ಲಾಳಿಯಾಗಿ ಕೆಲಸ ಮಾಡಲು ಆರಂಭಿಸಿದ್ದರು.
'ಇವತ್ತು ನಾನು ಬಿಲ್ಡರ್ ಆಗಿದ್ದು, ಔಡಿ ಕಾರನ್ನೂ ಹೊಂದಿದ್ದೇನೆ. ಕಾರಿನ ಸಮಾಧಿ ಎಂಬುದನ್ನು ನಾನು ಇದುವರೆಗೆ ಎಲ್ಲೂ ಕೇಳಿಲ್ಲ. ನನ್ನ ಕಾರಿಗೆ ಇದುವೇ ಸೂಕ್ತವಾದ ವಿದಾಯ ಎಂದುಕೊಂಡು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೆ' ಎಂದು ಅವರು ಹೇಳಿದರು.
ಅದ್ದೂರಿಯಾಗಿ ಕಾರ್ಯಕ್ರಮ ನಡೆಸಲು ಮುಂಚೆಯೇ ನಿರ್ಧರಿಸಿದ್ದ ಅವರು, ಅದಕ್ಕಾಗಿ ನಾಲ್ಕು ಪುಟಗಳ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ 1,500 ಜನರಿಗೆ ಹಂಚಿದ್ದರು.
'ಕಾರು ಕುಟುಂಬಕ್ಕೆ ಏಳಿಗೆಯನ್ನು ತಂದಿದ್ದು ಮಾತ್ರವಲ್ಲದೇ, ಸಮಾಜದಲ್ಲಿ ಕುಟುಂಬದ ಗೌರವವನ್ನು ಹೆಚ್ಚಿಸಿದೆ. ಅದಕ್ಕಾಗಿ ನಾವು ಕೃತಜ್ಞರಾಗಿದ್ದೇವೆ. ನೆಚ್ಚಿನ ಕಾರನ್ನು ನಮ್ಮ ನೆನಪಿನಲ್ಲಿ ಸದಾ ಇರಿಸುವುದಕ್ಕಾಗಿ ಅದನ್ನು ಸಮಾಧಿ ಮಾಡಲು ಯೋಜಿಸಿದ್ದೇವೆ' ಎಂದು ಆಮಂತ್ರಣ ಪತ್ರಿಕೆಯಲ್ಲಿ ಸಂಜಯ್ ಮುದ್ರಿಸಿದ್ದರು.
ನಿತ್ಯ ಸುದ್ದಿಗಳಿಗಾಗಿ ಸಮರಸ ಸುದ್ದಿ. ಡಾಟ್ ಕಾಂ ಗೆ ಭೇಟಿ ನೀಡಿ.
ಜನಪರ, ಕ್ರಿಯಾತ್ಮಕ ಮಾಧ್ಯಮಗಳಿಗೆ ಜನಬೆಂಬಲ ಅಗತ್ಯ
ನಿತ್ಯ ಸತ್ಯದೊಂದಿಗೆ ಧನಾತ್ಮಕ ಸಮಾಜ ನಿರ್ಮಾಣದ ಲಕ್ಷ್ಯವಿರಿಸಿ ಮುನ್ನಡೆಯುತ್ತಿರುವ ಸಮರಸ ಸುದ್ದಿ ಬಳಗಕ್ಕೆ ನಿಮ್ಮ ಬೆಂಬಲ ಅತ್ಯಗತ್ಯ.
ಸಮರಸ ಸುದ್ದಿ.ಡಾಟ್ ಕಾಮ್ ಗೆ ದೇಣಿಗೆ ನೀಡಿ ಹೆಗಲು ನೀಡಿ.
ಈ ಕೆಳಗಿನ ಸ್ಕ್ಯಾನರ್ ಮೂಲಕ ಗೂಗಲ್ ಪೇ ಮಾಡಲು ಕ್ಲಿಕ್ ಮಾಡಿ.
ಇದು ಗಡಿನಾಡು ಕಾಸರಗೋಡಿನ ಜನಧ್ವನಿ.