HEALTH TIPS

ಲೆಬನಾನ್‌ ಗೆ ಕರಡು ಒಪ್ಪಂದ ಪ್ರಸ್ತಾಪ ಹಸ್ತಾಂತರ | ಇಸ್ರೇಲ್-ಹಿಜ್ಬುಲ್ಲಾ ಸಂಘರ್ಷ ಅಂತ್ಯಕ್ಕೆ ಅಮೆರಿಕ ಯತ್ನ

 ಬೈರೂತ್ : ಇಸ್ರೇಲ್ ಮತ್ತು ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ ಗುಂಪಿನ ನಡುವಿನ ಹೋರಾಟವನ್ನು ನಿಲ್ಲಿಸುವ ನಿಟ್ಟಿನಲ್ಲಿ ಕರಡು ಒಪ್ಪಂದದ ಪ್ರಸ್ತಾಪವನ್ನು ಲೆಬನಾನ್ ಸ್ಪೀಕರ್ ಗೆ ಅಮೆರಿಕದ ರಾಯಭಾರಿ ಹಸ್ತಾಂತರಿಸಿರುವುದಾಗಿ ವರದಿಯಾಗಿದೆ.

ತನ್ನ ಮಿತ್ರ ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಹಿಜ್ಬುಲ್ಲಾ ನಡುವಿನ ಸಂಘರ್ಷವನ್ನು ಅಂತ್ಯಗೊಳಿಸುವ ಕದನ ವಿರಾಮ ಒಪ್ಪಂದವನ್ನು ರೂಪಿಸಲು ಅಮೆರಿಕ ಮಧ್ಯಸ್ಥಿಕೆ ವಹಿಸಿದ್ದು ಆದರೆ ಈ ಪ್ರಯತ್ನ ಇದುವರೆಗೆ ಫಲಪ್ರದವಾಗಿಲ್ಲ.

ಸೆಪ್ಟಂಬರ್ ಅಂತ್ಯದಲ್ಲಿ ದಕ್ಷಿಣ ಲೆಬನಾನ್‌ ನಲ್ಲಿ ಹಿಜ್ಬುಲ್ಲಾ ನೆಲೆಗಳ ಮೇಲಿನ ದಾಳಿಯನ್ನು ಇಸ್ರೇಲ್ ತೀವ್ರಗೊಳಿಸಿದೆ.


ಲೆಬನಾನ್‌ ಗೆ ಅಮೆರಿಕದ ರಾಯಭಾರಿ ಲೀಸಾ ಜಾನ್ಸನ್ ಗುರುವಾರ ಲೆಬನಾನ್ ಸಂಸತ್‍ನ ಸ್ಪೀಕರ್ ನಬೀಹ್ ಬೆರ್ರಿಯನ್ನು ಭೇಟಿ ಮಾಡಿ ಲೆಬನಾನ್‌ ನಲ್ಲಿ ಕದನ ವಿರಾಮ ಒಪ್ಪಂದದ ಕರಡು ಪ್ರತಿಯನ್ನು ಹಸ್ತಾಂತರಿಸಿದ್ದಾರೆ ಎಂದು ರಾಯ್ಟರ್ಸ್ ವರದಿ ಮಾಡಿದೆ. ಹಿಜ್ಬುಲ್ಲಾ ಮಿತ್ರನೆಂದು ಗುರುತಿಸಿಕೊಂಡಿರುವ ಬೆರ್ರಿ ಹಿಜ್ಬುಲ್ಲಾ ಜತೆ ರಾಜತಾಂತ್ರಿಕ ಮಾತುಕತೆಯ ಕೊಂಡಿಯಾಗಿದ್ದಾರೆ.

ಇದು ಲೆಬನಾನ್‌ ನ ಅವಲೋಕನಕ್ಕೆ ಒದಗಿಸಲಾಗಿರುವ ಕರಡು ಪ್ರತಿಯಾಗಿದೆ ಎಂದು ಮೂಲಗಳು ಹೇಳಿದ್ದು ಪ್ರಸ್ತಾಪದ ಕುರಿತ ವಿವರಗಳನ್ನು ಒದಗಿಸಿಲ್ಲ. ರವಿವಾರ ಕಾರ್ಯತಂತ್ರದ ವ್ಯವಹಾರಗಳ ಸಚಿವ ರಾನ್ ಡೆರ್ಮರ್ ಜತೆ ಸಭೆ ನಡೆಸಿದ ಬಳಿಕ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಕ್ಕೆ ಸಹಿ ಹಾಕಿದ್ದಾರೆ. ಪ್ರಸ್ತಾಪದ ಬಗ್ಗೆ ಸಚಿವರಿಂದ ಟ್ರಂಪ್ ವಿವರ ಪಡೆದಿದ್ದು ತಾನು 2025ರ ಜನವರಿ 20ರಂದು ಅಧಿಕಾರ ವಹಿಸಿಕೊಳ್ಳುವುದಕ್ಕೂ ಮುನ್ನ ಇದು ಜಾರಿಗೊಳ್ಳುವ ನಿರೀಕ್ಷೆ ವ್ಯಕ್ತಪಡಿಸಿದರು ಎಂದು `ವಾಲ್‍ಸ್ಟ್ರೀಟ್ ಜರ್ನಲ್' ವರದಿ ಮಾಡಿದೆ.

ಈ ಮಧ್ಯೆ, ಗುರುವಾರ ಫ್ರಾನ್ಸ್ ವಿದೇಶಾಂಗ ಸಚಿವ ಜೀನ್-ನೊಯೆಲ್ ಬ್ಯಾರಟ್ ಜತೆ ದೂರವಾಣಿಯಲ್ಲಿ ಮಾತನಾಡಿದ ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾ'ರ್ `ಲೆಬನಾನ್‌ ನಲ್ಲಿ ಕದನ ವಿರಾಮ ಒಪ್ಪಂದದ ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗಿದ್ದು ಇದು ಇಸ್ರೇಲಿ ಪ್ರಜೆಗಳು ತಮ್ಮ ಮನೆಗೆ ಸುರಕ್ಷಿತವಾಗಿ ಹಿಂದಿರುಗಲು ಅವಕಾಶ ಮಾಡಿಕೊಡಲಿದೆ' ಎಂದು ಆಶಾವಾದ ವ್ಯಕ್ತಪಡಿಸಿದರು. ಜತೆಗೆ, ಯಾವುದೇ ಒಪ್ಪಂದದ ಜಾರಿಯೂ ಗಡಿಭಾಗದಿಂದ ಹಿಜ್ಬುಲ್ಲಾಗಳನ್ನು ದೂರ ಇರಿಸುವುದು ಮತ್ತು ಸಿರಿಯಾದ ಮೂಲಕ ಶಸ್ತ್ರಾಸ್ತ್ರ ಪಡೆಯದಂದೆ ತಡೆಯುವುದನ್ನು ಖಾತರಿ ಪಡಿಸಬೇಕು. ಲೆಬನಾನ್ ಮತ್ತೊಮ್ಮೆ ಲೆಬನಾನ್‌ ನ ಜನತೆಗೆ ಸೇರುತ್ತದೆಯೇ ಹೊರತು ಇರಾನ್ ಆಡಳಿತಕ್ಕಲ್ಲ ಎಂದು ಖಚಿತಪಡಿಸುವಲ್ಲಿ ಅಂತರಾಷ್ಟ್ರೀಯ ಸಮುದಾಯ ಪ್ರಮುಖ ಪಾತ್ರ ವಹಿಸಬೇಕು ಎಂದವರು ಆಗ್ರಹಿಸಿದ್ದಾರೆ.

ಕದನ ವಿರಾಮ ಒಪ್ಪಂದಕ್ಕೆ ನಾವು ಇನ್ನಷ್ಟು ಸನಿಹ ಬಂದಿದ್ದೇವೆ. ಆದರೆ ಒಪ್ಪಂದದ ಯಾವುದೇ ಅಂಶದ ಉಲ್ಲಂಘನೆಯಾದರೆ ಲೆಬನಾನ್‌ ನ ಒಳಗೆ ಕಾರ್ಯನಿರ್ವಹಿಸುವ ಸ್ವಾತಂತ್ರ್ಯವನ್ನು ನಾವು ಉಳಿಸಿಕೊಳ್ಳುತ್ತೇವೆ' ಎಂದು ಇಸ್ರೇಲ್‌ ನ ಇಂಧನ ಸಚಿವ ಎಲಿ ಕೊಹೆನ್ ಹೇಳಿದ್ದಾರೆ.

ಲೆಬನಾನ್‌ ನಲ್ಲಿ ಇಸ್ರೇಲ್‌ ನ ನೇರ ಕಾರ್ಯಾಚರಣೆಯ ಹಕ್ಕಿನ ಅಂಶವನ್ನು ಹಿಜ್ಬುಲ್ಲಾ ತಿರಸ್ಕರಿಸಲಿದೆ. ಇಸ್ರೇಲ್ ಯಾವುದೇ ಸಮಯದಲ್ಲೂ ಹಕ್ಕನ್ನು ಜಾರಿಗೊಳಿಸಬಹುದು ಎಂಬ ಕಲ್ಪನೆ ಯೋಚಿಸಲಾಗದು ಎಂದು ಲೆಬನಾನ್ ಅಧಿಕಾರಿಗಳು ಹೇಳಿದ್ದಾರೆ.

► ಲೆಬನಾನ್‌ ನ ಸಶಸ್ತ್ರ ಪಡೆಗಳ ಮರು ನಿಯೋಜನೆಗೆ ಆದ್ಯತೆ

ದಕ್ಷಿಣ ಲೆಬನಾನ್‌ ನಲ್ಲಿ ಲೆಬನಾನ್‌ ನ ಸಶಸ್ತ್ರ ಪಡೆಗಳ ಮರು ನಿಯೋಜನೆಯು ಅಲ್ಲಿ ಯಾವುದೇ ಶಾಶ್ವತ ಪರಿಹಾರಕ್ಕೆ ಪ್ರಧಾನ ಅಂಶವಾಗಿದೆ ಎಂದು ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯ ಮುಖ್ಯಸ್ಥ ಜೀನ್-ಪಿಯರೆ ಲಕ್ರೋಯಿಕ್ಸ್ ಹೇಳಿದ್ದಾರೆ.

ಒಮ್ಮೆ ಕದನ ವಿರಾಮ ಒಪ್ಪಂದಕ್ಕೆ ಸಹಿ ಬಿದ್ದರೆ ದಕ್ಷಿಣ ಲೆಬನಾನ್‌ ನಲ್ಲಿ ಲೆಬನಾನ್ ಸೇನೆಗೆ ಬೆಂಬಲವಾಗಿ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯ ಬಲವನ್ನು ಹೆಚ್ಚಿಸಲಾಗುವುದು. 2006ರ ವಿಶ್ವಸಂಸ್ಥೆ ನಿರ್ಣಯವನ್ನು ಅನುಷ್ಠಾನಗೊಳಿಸುವುದು ಎಲ್ಲಾ ಪಕ್ಷಗಳ ಹೊಣೆಯಾಗಿದೆ. ವಿಶ್ವಸಂಸ್ಥೆ ಶಾಂತಿಪಾಲನಾ ತಂಡ ಪೋಷಕ ಪಾತ್ರವನ್ನು ಹೊಂದಿದೆ ಎಂದವರು ಹೇಳಿದ್ದಾರೆ. ಲೆಬನಾನ್‌ ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಮೇಲುಸ್ತುವಾರಿಯನ್ನು ಜೀನ್-ಪಿಯರೆ ವಹಿಸಿದ್ದಾರೆ.

ತಕ್ಷಣ ಕದನ ವಿರಾಮಕ್ಕೆ ಸಿದ್ಧ : ಹಮಾಸ್

ಗಾಝಾದಲ್ಲಿ ತಕ್ಷಣ ಕದನ ವಿರಾಮಕ್ಕೆ ಹಮಾಸ್ ಸಿದ್ಧವಿದೆ. ಆದರೆ ಈ ವಿಷಯದಲ್ಲಿ ಇಸ್ರೇಲ್ ಯಾವುದೇ ಗಂಭೀರ ಪ್ರಸ್ತಾಪ ಮುಂದಿರಿಸಿಲ್ಲ ಎಂದು ಹಮಾಸ್ ಸಶಸ್ತ್ರ ಹೋರಾಟಗಾರರ ಗುಂಪಿನ ಅಧಿಕಾರಿ ಹೇಳಿರುವುದಾಗಿ ವರದಿಯಾಗಿದೆ.

ಇಸ್ರೇಲ್-ಹಮಾಸ್ ನಡುವಿನ ಯುದ್ಧವನ್ನು ನಿಲ್ಲಿಸುವ ಬಗ್ಗೆ ಉತ್ತಮವಾಗಿ ವ್ಯಾಖ್ಯಾನಿಸಲಾದ ಒಪ್ಪಂದವನ್ನು ಜುಲೈ 2ರಂದು ಮಾತುಕತೆಯ ಮೇಜಿನ ಮೇಲೆ ಇರಿಸಲಾಗಿತ್ತು. ಗಾಝಾದಿಂದ ಇಸ್ರೇಲ್ ಪಡೆ ಸಂಪೂರ್ಣ ವಾಪಸಾತಿ, ಒತ್ತೆಯಾಳುಗಳ ಬಿಡುಗಡೆಯ ಅಂಶವನ್ನು ಒಳಗೊಂಡ ಪ್ರಸ್ತಾಪದ ಬಗ್ಗೆ ವಿಸ್ತೃತ ಸಮಾಲೋಚನೆ ನಡೆದ ಬಳಿಕ ನಾವು ಸಮ್ಮತಿಸಿದ್ದೆವು. ಆದರೆ ದುರದೃಷ್ಟವಶಾತ್ ಇಸ್ರೇಲ್ ಪ್ರಧಾನಿ ನೆತನ್ಯಾಹು ಯುದ್ಧ ಮುಂದುವರಿಸುವುದಕ್ಕೆ ಆದ್ಯತೆ ನೀಡಿದರು' ಎಂದು ಹಮಾಸ್ ಉನ್ನತ ಅಧಿಕಾರಿ, ಗಾಝಾದ ಮಾಜಿ ಆರೋಗ್ಯ ಅಧಿಕಾರಿ ಬಾಸೆಮ್ ನಯೀಮ್ ರನ್ನು ಉಲ್ಲೇಖಿಸಿ `ಸ್ಕೈ ನ್ಯೂಸ್' ವರದಿ ಮಾಡಿದೆ


.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries