ಕಾಸರಗೋಡು: ಚಿನ್ಮಯ ಮಿಷನಿನ ಆಧ್ಯಾತ್ಮಿಕ ಆಚಾರ್ಯರಾದ ಚಿನ್ಮಯಾನಂದ ಸ್ವಾಮೀಜಿಯವರ ಜನ್ಮ ಶತಾಬ್ದಿಯ ಅಂಗವಾಗಿ ಆರಂಭಗೊಂಡ 'ವಸತಿ ರಹಿತರಿಗೊಂದು ವಸತಿ ಪದ್ದತಿ'ಗೆ ಅನುಗುಣವಾಗಿ ಕಾಸರಗೋಡು ಚಿನ್ಮಯ ಮಿಷನಿನ ನೇತೃತ್ವದಲ್ಲಿ ನಿರ್ಮಾಣಗೊಂಡ ಎಂಟನೇ ವಸತಿಯನ್ನು ಕೇರಳ ಚಿನ್ಮಯ ಮಿಷನಿನ ಮುಖ್ಯಸ್ಥ ಹಾಗೂ ಕಾಸರಗೋಡು ಚಿನ್ಮಯ ವಿದ್ಯಾಲಯದ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಸರಸ್ವತಿಯವರು ಫಲಾನುಭವಿಗಳಾದ ಕಲ್ಲಂಗೈ ಶಾಸ್ತಾನಗರ ನಿವಾಸಿಯಾದ ಗಣೇಶ್ ಎಂಬವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿಯವರು ನಮಗೆ ಹತ್ತು ವಸತಿಗಳನ್ನು ನಿರ್ಮಿಸಿ ಕೊಡುವ ಜವಾಬ್ದಾರಿಯನ್ನು ವಹಿಸಿದ್ದರೂ ಅದಕ್ಕಿಂತಲೂ ಹೆಚ್ಚಿನ ವಸತಿಗಳನ್ನು ನಿರ್ಮಿಸುವಲ್ಲಿ ತಾವು ಕಾರ್ಯಗಳನ್ನು ಕೈಗೊಳ್ಳುತ್ತೇವೆ ಎಂಬ ಇಚ್ಛೆಯನ್ನು ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಬಾಲ ವಿಹಾರದಲ್ಲಿ ಸೇವೆ ಸಲ್ಲಿಸುತ್ತಿರುವ ಇಂದಿರಾ ರಾಧಾಕೃಷ್ಣನ್ ಮತ್ತು ಕಾಂಟ್ರಾಕ್ಟರ್ ದಿನೇಶ್ ನಾಯಕ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತಾಜಿ ದಿಶಾ ಚೈತನ್ಯ, ಚಿನ್ಮಯ ಮಿಷನಿನ ಅಧ್ಯಕ್ಷ ಎ.ಕೆ ನಾಯರ್, ಉಪ ಪ್ರಾಂಶುಪಾಲ ಪ್ರಶಾಂತ. ಬಿ, ಮುಖ್ಯೋಪಾಧ್ಯಾಯಿನಿಯರಾದ ಪೂರ್ಣಿಮಾ ಎಸ್.ಆರ್ ಮತ್ತು ಸಿಂಧು ಶಶಿಂದ್ರನ್, ಅಧ್ಯಾಪಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಚಿನ್ಮಯ ಮಿಷನಿನ ಕಾರ್ಯದರ್ಶಿ ಬಾಲಚಂದ್ರನ್ ಸ್ವಾಗತಿಸಿ, ವಿದ್ಯಾಲಯದ ಪ್ರಾಂಶುಪಾಲ ಸುನಿಲ್ ಕುಮಾರ್ ಕೆ.ಸಿ ವಂದಿಸಿದರು.