ಕೊಲಂಬೊ: ಶ್ರೀಲಂಕಾದ ಅಧ್ಯಕ್ಷ ಅನುರಾ ಡಿಸ್ಸಾನಾಯಕೆ ಅವರು ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ಸರ್ಕಾರದ ಸಂಪುಟಕ್ಕೆ 21 ಸಚಿವರನ್ನು ಸೋಮವಾರ ಆಯ್ಕೆ ಮಾಡಿದ್ದಾರೆ.
ಹಣಕಾಸು ಮತ್ತು ರಕ್ಷಣಾ ಖಾತೆಗಳನ್ನು ಡಿಸ್ಸಾನಾಯಕೆ ಅವರೇ ಉಳಿಸಿಕೊಂಡಿದ್ದು, 12 ಹೊಸ ಸದಸ್ಯರಿಗೆ ಸಂಪುಟದಲ್ಲಿ ಪ್ರಮುಖ ಸ್ಥಾನಗಳನ್ನು ನೀಡಿದ್ದಾರೆ.
ಡಿಸ್ಸಾನಾಯಕೆ ಸಂಪುಟದಲ್ಲಿ ಇಬ್ಬರು ಮಹಿಳಾ ಸದಸ್ಯರಿದ್ದಾರೆ. ಪ್ರಧಾನಿ ಹರಿಣಿ ಅಮರಸೂರ್ಯ ಅವರು ಶಿಕ್ಷಣ ಖಾತೆ ನಿರ್ವಹಿಸುತ್ತಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಗೆ ಸರೋಜಾ ಸಾವಿತ್ರಿ ಪಾಲ್‌ರಾಜ್ ಅವರನ್ನು ನೇಮಿಸಲಾಗಿದೆ. ಹೊಸ ಸಂಪುಟ ಗುರುವಾರ ಸಭೆ ಸೇರಲಿದೆ.
ಹೊಸ ಸಂಪುಟವನ್ನು ಉದ್ದೇಶಿಸಿ ಮಾತನಾಡಿದ ಡಿಸ್ಸಾನಾಯಕೆ, 'ನಮಗೆ ನೀಡಿರುವ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ. ಹೆಚ್ಚಿನ ಸದಸ್ಯರು ಸಚಿವ ಸಂಪುಟಕ್ಕೆ ಹೊಸಬರಾಗಿದ್ದರೂ, ರಾಜಕೀಯಕ್ಕೆ ಹೊಸಬರಲ್ಲ. ನಮ್ಮ ಘೋಷಣೆಗಳಿಗೆ ಬದ್ಧವಾಗಿ ಕೆಲಸ ಮಾಡಬೇಕು' ಎಂದರು.
ತಮಿಳಿನಲ್ಲಿ ಪ್ರಮಾಣ ವಚನ ಸ್ವೀಕಾರ: ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮೀನುಗಾರಿಕಾ ಸಚಿವ ರಾಮಲಿಂಗಂ ಚಂದ್ರಶೇಖರನ್ ಅವರು ತಮಿಳಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಹೊಸ ಸರ್ಕಾರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರಾತಿನಿಧ್ಯವನ್ನು ಎತ್ತಿಹಿಡಿದಿದ್ದಾರೆ.