ಟೋಂಕ್ : ಪಕ್ಷೇತರ ಅಭ್ಯರ್ಥಿ ನರೇಶ್ ಮೀನಾ ಬಂಧನ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಪಿಟಿಐ ಪತ್ರಕರ್ತರ ಮೇಲೆ ಕೆಲವರು ಹಲ್ಲೆ ನಡೆಸಿ, ಕ್ಯಾಮರಾವನ್ನೂ ಕಿತ್ತುಕೊಂಡು ಬೆಂಕಿ ಹಚ್ಚಿದ್ದಾರೆ.
ಪರಿಸ್ಥಿತಿಯನ್ನು ಅವಲೋಕಿಸಲು ಘಟನಾ ಸ್ಥಳಕ್ಕೆ ತೆರಳಿದ್ದ ಕೃಷಿ ಸಚಿವ ಕಿರೋಡಿ ಲಾಲ್ ಮೀನಾ ಅವರನ್ನು ಸಂದರ್ಶಿಸಲು ಮುಂದಾದಾಗ ಹಲ್ಲೆ ನಡೆದಿದೆ.
ಗಾಯಗೊಂಡಿರುವ ವರದಿಗಾರ ಹಾಗೂ ಛಾಯಾಗ್ರಾಹಕನಿಗೆ ಭದ್ರತೆ ಒದಗಿಸುವಂತೆ ಮುಖ್ಯಮಂತ್ರಿಗಳ ಕಚೇರಿಯು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದೆ. ಅಲ್ಲದೇ ಅವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಆರೋಗ್ಯ ಅಧಿಕಾರಿ (ಸಿಎಂಎಚ್‌ಒ) ಸವಾಯಿ ಮಾಧೋಪುರ ಅವರಿಗೆ ಸೂಚನೆ ನೀಡಿದೆ.
ಸವಾಯಿ ಮಾಧೋಪುರದ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯ ಬಳಿಕ ಇಬ್ಬರನ್ನು ಜೈಪುರದ ಸವಾಯಿ ಮಾನ್ ಸಿಂಗ್ (ಎಸ್‌ಎಂಎಸ್) ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಸದೀಯ ವ್ಯವಹಾರಗಳ ಸಚಿವ ಜೋಗರಾಮ್ ಪಟೇಲ್, ಗೃಹ ಸಚಿವ ಜವಾಹರ್ ಸಿಂಗ್ ಬೇಧಮ್ ಮತ್ತು ಸಿಎಂ ಅವರ ಮಾಧ್ಯಮ ಸಲಹೆಗಾರರಾದ ಆನಂದ್ ಶರ್ಮಾ ಮತ್ತು ಹಿರೇನ್ ಜೋಶಿ ಆಸ್ಪತ್ರೆಗೆ ಭೇಟಿ ನೀಡಿ ಅವರ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ.
ಹಲ್ಲೆಯನ್ನು ಖಂಡಿಸಿದ ಇಬ್ಬರೂ ಸಚಿವರು, ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಕೂಡ ಘಟನೆಯನ್ನು ಖಂಡಿಸಿದ್ದು, ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಘಟನೆಯ ಹಿನ್ನೆಲೆ:
ಉಪ ಚುನಾವಣೆ ಮತದಾನದ ವೇಳೆ ಡಿಯೋಲಿ-ಉನಿಯಾರಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನರೇಶ್ ಮೀನಾ ಅವರು, ಚುನಾವಣಾ ನಿಯಮಗಳನ್ನು ಮೇಲ್ವಿಚಾರಣೆ ಮಾಡಲು ಕರ್ತವ್ಯದಲ್ಲಿದ್ದ ಎಸ್‌ಡಿಎಂ ಅಮಿತ್ ಚೌಧರಿ ಅವರಿಗೆ ಕಪಾಳಮೋಕ್ಷ ಮಾಡಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.
ಮೀನಾ ಅವರನ್ನು ಬಂಧಿಸಲು ತೆರಳಿದಾಗ ಹೈಡ್ರಾಮ ನಡೆದಿದೆ. ಬಂಧನಕ್ಕೆ ಅಡ್ಡಿಪಡಿಸಿದ ಬೆಂಬಲಿಗರು ಹಾಗೂ ಗ್ರಾಮಸ್ಥರು ಹಿಂಸಾತ್ಮಾಕ ಪ್ರತಿಭಟನೆ ನಡೆಸಿದ್ದಾರೆ.