ಕಾಸರಗೋಡು: ಜಿಲ್ಲಾ ಪೊಲೀಸ್ ಇಲಾಖೆಯ ಘನತೆ ಮತ್ತು ಖ್ಯಾತಿ ಹೆಚ್ಚಿಸಿದ್ದ ಜಿಲ್ಲಾಪೊಲೀಸ್ ಇಲಾಖೆಯ ಶ್ವಾನದಳದ 'ರೂಣಿ' ಸೇವೆಯಿಂದ ನಿವೃತ್ತಿ ಹೊಂದಿದ್ದು, ಪೊಲೀಸ್ ಇಲಾಖೆ ಈಕೆಯನ್ನು ಸಕಲ ಗೌರವದೊಂದಿಗೆ ಬೀಳ್ಕೊಟ್ಟಿದೆ. ಕಾಸರಗೋಡು ಕೆ-9ಸ್ಕ್ವಾಡ್‍ನ ಟ್ರಾಕರ್ ಆಗಿದ್ದ ಪೊಲೀಸ್ ಶ್ವಾನ ಇದಾಗಿದ್ದು, ಸುಮಾರು ಎಂಟುವರೆ ವರ್ಷಗಳ ಸೇವೆ ನಂತರದ ವಿಶ್ರಾಂತ ಜೀವನವನ್ನು ರೂಣಿ ತ್ರಿಶ್ಯೂರಿನ ವಿಶ್ರಾಂತಿ ಕೇಂದ್ರದಲ್ಲಿ ಕಳೆಯಲಿದ್ದಾಳೆ.
ಜರ್ಮನ್ ಶೆಫರ್ಡ್ ವಿಭಾಗಕ್ಕೆ ಸೇರಿದ ರೂಣಿ ಹೆಸರಿನ ಶ್ವಾನವನ್ನು ಒಂದುವರೆ ವರ್ಷ ಪ್ರಾಯದಲ್ಲಿ ತೃಶ್ಯೂರಿನ ಡಾಗ್ ಟ್ರೈನಿಂಗ್ ಸೆಂಟರ್‍ನಿಂದ ಒಂಬತ್ತು ತಿಂಗಳ ತರಬೇತಿಯ ನಂತರ 2016 ಏ. 10ರಂದು ಕಾಸರಗೋಡು ಕೆ-9ಸ್ಕ್ವಾಡ್ ಶ್ವಾನದಳಕ್ಕೆ ಸೆರ್ಪಡೆಗೊಳಿಸಲಾಗಿತ್ತು. ಶ್ವಾನದಳದ ಕಾರ್ಯಾಚರಣೆಯಲ್ಲಿ ಕೊಲೆ, ಕಳವು, ನಾಪತ್ತೆ ಹೀಗೆ ಹಲವು ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಕಾಯ್ದಲ್ಲಿ ರೂಣಿ ಪೊಲೀಸರಿಗೆ ಹೆಚ್ಚಿನ ಸಹಾಯ ಒದಗಿಸಿದ್ದಳು.
ರೂಣಿ ಕಾಸರಗೋಡಿನ ಶ್ವಾನವಿಭಾಗಕ್ಕೆ ಸೇರ್ಪಡೆಗೊಂಡ ಮೊದಲ ಕಾರ್ಯಚರಣೆಯಲ್ಲೇ ಶಹಬ್ಬಾಸ್ ಗಿಟ್ಟಿಸಿಕೊಂಡಿದ್ದಳು. ಚಿತ್ತಾರಿಕ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆಪ್ರಕರಣದ ಆರೋಪಿಯ ಬಂಧನದಲ್ಲಿ ಮಹತ್ವದ ಪಾತ್ರ ವಹಿಸಿದ್ದ ರೂಣಿ ನಂತರ ವಿವಿಧ ಠಾಣೆಗಳಲ್ಲಿ ಹತ್ತುಹಲವು ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡು ಯಶಸ್ಸು ಗಿಟ್ಟಿಸಿಕೊಂಡಿದ್ದಳು.
ಆರೋಪಿಗಳ ಪತ್ತೆಕಾರ್ಯದಲ್ಲಿ ಚಾಕಚಕ್ಯತೆ ಮೆರೆದಿದ್ದ ರೂಣಿ, ಪೊಲೀಸ್ ಮೀಟ್‍ಗಳಲ್ಲಿ ಪದಕ ಗಳಿಕೆಯಲ್ಲೂ ಮುಂಚೂಣಿಯಲ್ಲಿದ್ದಳು. 208ರ ಪೊಲೀಸ್ ಡ್ಯೂಟಿಮೀಟ್‍ನಲ್ಲಿ ಸಿಲ್ವರ್ ಮೆಡಲ್, 2019ರಲ್ಲಿ ಲಕನೌನಲ್ಲಿ ನಡೆದ ಅಖಿಲಭಾರತ ಪೊಲೀಸ್ ಡ್ಯೂಟಿ ಮೀಟ್‍ನಲ್ಲಿ ಪಾಲ್ಗೊಂಡು ಏಳನೇ ಸ್ಥಾನ ಗಳಿಸಿದ್ದಳು. ಜಿಲ್ಲಾ ಡಾಗ್ ಸಕ್ವೇಡ್‍ನ ಪೊಲೀಸ್ ಅಧಿಕಾರಿಗಳಾದ ಎಸ್. ರಂಜಿತ್ ಹಾಗೂ ಆರ್.ಪ್ರಜೇಶ್ ರೂಣಿಗೆ ತರಬೇತಿ ನೀಡಿದ್ದರು.
ಜಿಲ್ಲಾ ಪೊಲೀಸ್ ಹೆಡ್‍ಕ್ವಾರ್ಟರ್ಸ್‍ನಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿಲ್ಪಾ ಡಿ ಹಾಗೂ ಇತರ ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ರೂಣಿಗೆ ಬೀಳ್ಕೊಡುಗೆ ಹಮ್ಮಿಕೊಳ್ಳಲಾಗಿತ್ತು.
ನಿತ್ಯ ಸುದ್ದಿಗಳಿಗಾಗಿ ಸಮರಸ ಸುದ್ದಿ. ಡಾಟ್ ಕಾಂ ಗೆ ಭೇಟಿ ನೀಡಿ.
ಜನಪರ, ಕ್ರಿಯಾತ್ಮಕ ಮಾಧ್ಯಮಗಳಿಗೆ ಜನಬೆಂಬಲ ಅಗತ್ಯ
ನಿತ್ಯ ಸತ್ಯದೊಂದಿಗೆ ಧನಾತ್ಮಕ ಸಮಾಜ ನಿರ್ಮಾಣದ ಲಕ್ಷ್ಯವಿರಿಸಿ ಮುನ್ನಡೆಯುತ್ತಿರುವ ಸಮರಸ ಸುದ್ದಿ ಬಳಗಕ್ಕೆ ನಿಮ್ಮ ಬೆಂಬಲ ಅತ್ಯಗತ್ಯ.
ಸಮರಸ ಸುದ್ದಿ.ಡಾಟ್ ಕಾಮ್ ಗೆ ದೇಣಿಗೆ ನೀಡಿ ಹೆಗಲು ನೀಡಿ.
ಈ ಕೆಳಗಿನ ಸ್ಕ್ಯಾನರ್ ಮೂಲಕ ಗೂಗಲ್ ಪೇ ಮಾಡಲು ಕ್ಲಿಕ್ ಮಾಡಿ.
ಇದು ಗಡಿನಾಡು ಕಾಸರಗೋಡಿನ ಜನಧ್ವನಿ.