ಕಾಸರಗೋಡು: ಜಿಲ್ಲೆಯಲ್ಲಿ 1ನೇ ಹಂತದ ಬೀದಿ ನಾಯಿ ಲಸಿಕಾ ಅಭಿಯಾನ ಯಶಸ್ವಿಯಾಗಿ ಪೂರ್ಣಗೊಂಡಿದೆ. ಪ್ರಸ್ತುತ 31 ಪಂಚಾಯಿತಿಗಳಲ್ಲಿ ಯೋಜನೆ ರೂಪಿಸಲಾಗಿದೆ. 14ಗ್ರಾಮ ಪಂಚಾಯಿತಿಗಳು, ಕಾಂಞಂಗಾಡ್, ನೀಲೇಶ್ವರ ನಗರಸಭೆಗಳಲ್ಲಿ ಯೋಜನೆ ಅನುಷ್ಠಾನಗೊಳಿಸುವ ಮೂಲಕ 2500 ಬೀದಿ ನಾಯಿಗಳಿಗೆ ಲಸಿಕೆ ಹಾಕಲಾಗಿದೆ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಲಸಿಕೆ ನೀಡುವ ಕಾರ್ಯಖ್ರಮ ಹಮ್ಮಿಕೊಲ್ಳಲಾಗಿದ್ದು, ಪಶು ಕಲ್ಯಾಣ ಇಲಾಖೆ, ಪಂಚಾಯಿತಿ ಅಧಿಕಾರಿಗಳು ಹಾಗೂ ಪಂಚಾಯಿತಿ ಆಡಳಿತ ಮಂಡಳಿಗಳ ವಿಶೇಷ ಆಸಕ್ತಿ, ಶ್ರಮ ಹಾಗೂ ಸಹಕಾರ ಅಭಿಯಾನದ ಯಶಸ್ಸಿಗೆ ಸಹಕಾರಿಯಾಗಿದೆ. ಜಿಲ್ಲಾ ಪಶು ಸಂರಕ್ಷಣಾಧಿಕಾರಿ ಡಾ. ಪಿ.ಕೆ.ಮನೋಜಕುಮಾರ್ ಅವರ ವಿಶೇಷ ಆಸಕ್ತಿಯ ಪ್ರಕಾರ ಪಂಚಾಯಿತಿಗಳಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ.
ಕಾಸರಗೋಡು ಜಿಲ್ಲೆಯಲ್ಲಿ ಪ್ರಸ್ತುತ ಶ್ವಾನದಳ ಇಲ್ಲದ ಕಾರಣ ಆಲಪ್ಪುಳ ಮತ್ತು ಮಲಪ್ಪುರಂ ಜಿಲ್ಲೆಗಳಿಂದ ತರಬೇತಿ ಪಡೆದ ಶ್ವಾನ ದಳದ ಸದಸ್ಯರನ್ನು ಕರೆತಂದು ನಾಯಿಗಳನ್ನು ಹಿಡಿದು ಲಸಿಕೆ ನಿಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪಶುಸಂಗೋಪನಾ ಇಲಾಖೆಯಲ್ಲಿ ಜಾನುವಾರು ನಿರೀಕ್ಷಕರು ನಾಯಿಗಳಿಗೆ ಚುಚ್ಚುಮದ್ದು ನೀಡುತ್ತಿದ್ದಾರೆ. ಯೋಜನೆ ಅನುಷ್ಠಾನಗೊಳಿಸದ 11 ಗ್ರಾಮ ಪಂಚಾಯಿತಿಗಳು ತಕ್ಷಣ ಬೀದಿನಾಯಿಗಳಿಗೆ ಲಸಿಕೆ ಹಾಕುವ ಯೋಜನೆಗೆ ತಯಾರಿ ನಡೆಸಿಕೊಳ್ಳುವಂತೆ ಜಿಲ್ಲಾ ಪಶು ಸಂರಕ್ಷಣಾಧಿಕಾರಿ ಮನವಿ ಮಾಡಿದ್ದಾರೆ. ಪ್ರತಿ ವರ್ಷ ಅಕ್ಟೋಬರ್ ಮತ್ತು ನವೆಂಬರ್‍ನಲ್ಲಿ ನಿಖರವಾಗಿ ಬೀದಿ ನಾಯಿಗಳಿಗೆ ಲಸಿಕೆ ಹಾಕುವುದರಿಂದ ರೇಬೀಸ್ ರೋಗವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ಪಶು ಕಲ್ಯಾಣ ಇಲಾಖೆ ತಿಳಿಸಿದೆ.