ತಿರುಪತಿ : ತಿರುಮಲದ ಪವಿತ್ರತೆ ಮತ್ತು ಆಧ್ಯಾತ್ಮಿಕ ಶಾಂತಿಯನ್ನು ಕಾಪಾಡುವ ಉದ್ದೇಶದಿಂದ ರಾಜಕೀಯ ಮತ್ತು ದ್ವೇಷದ ಭಾಷಣಗಳನ್ನು ನಿಷೇಧಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಶನಿವಾರ ಘೋಷಿಸಿವೆ.
ಸದಾ ಗೋವಿಂದ ನಾಮಸ್ಮರಣೆ ಮೊಳಗುವ ಪವಿತ್ರ ತಿರುಮಲ ದೈವಸ್ಥಾನದಲ್ಲಿ ಇತ್ತೀಚಿನ ದಿನಗಳಲ್ಲಿ ರಾಜಕೀಯ ನಾಯಕರು ಸೇರಿದಂತೆ ಕೆಲವರು ದೇವರ ದರ್ಶನ ಪಡೆದ ಬಳಿಕ ದೇವಸ್ಥಾನದ ಎದುರು ಮಾಧ್ಯಮಗಳ ಮುಂದೆ ರಾಜಕೀಯ ದ್ವೇಷದ ಹೇಳಿಕೆಗಳನ್ನು ನೀಡುವ ಮೂಲಕ ಆಧ್ಯಾತ್ಮಿಕತೆಗೆ ಧಕ್ಕೆ ಉಂಟು ಮಾಡುತ್ತಿರುವುದು ಗಮನಕ್ಕೆ ಬಂದಿದೆ' ಎಂದು ಟಿಟಿಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ನಿರ್ಧಾರಕ್ಕೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡುತ್ತೇವೆ. ಹಾಗೆಯೇ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಟಿಟಿಡಿ ಎಚ್ಚರಿಕೆ ನೀಡಿದೆ.
'ತಿರುಮಲದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಹಿಂದೂಗಳೇ ಆಗಿರಬೇಕು' ಎಂದು ಪ್ರತಿಪಾದಿಸಿರುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿಯ ನೂತನ ಅಧ್ಯಕ್ಷ ಬಿ.ಆರ್. ನಾಯ್ಡು ಅವರು, 'ಇದಕ್ಕಾಗಿ ನಾನು ಕಾರ್ಯ ನಿರ್ವಹಿಸುತ್ತೇನೆ' ಎಂದು ಈಚೆಗೆ ತಿಳಿಸಿದ್ದರು.
'ಇತರ ಧರ್ಮಕ್ಕೆ ಸೇರಿದ ಸಿಬ್ಬಂದಿ ಕುರಿತು ಆಂಧ್ರಪ್ರದೇಶ ಸರ್ಕಾರದ ಜತೆ ಚರ್ಚಿಸಲಾಗುವುದು. ಈ ಸಿಬ್ಬಂದಿಯನ್ನು ಸರ್ಕಾರದ ಇತರ ಇಲಾಖೆಗಳಿಗೆ ನಿಯುಕ್ತಿಗೊಳಿಸುವ ಅಥವಾ ಸ್ವಯಂ ನಿವೃತ್ತಿಗೆ (ವಿಆರ್‌ಎಸ್) ಅವಕಾಶ ಕಲ್ಪಿಸುವ ಕುರಿತು ಸಮಾಲೋಚನೆ ನಡೆಸಲಾಗುವುದು' ಎಂದು ಅವರು ಹೇಳಿದ್ದರು.
ಹಿಂದಿನ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಿರುಮಲದಲ್ಲಿ ಅವ್ಯವಹಾರಗಳು ನಡೆದಿವೆ ಎಂದ ಅವರು, ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರು.
ಈ ಎಲ್ಲಾ ಬೆಳವಣಿಗೆಗಳ ನಡುವೆ ತಿರುಪತಿಯ ಲಾಡು ಕಲಬೆರಕೆ ಪ್ರಕರಣದ ತನಿಖೆಗೆ ಆಂಧ್ರಪ್ರದೇಶ ಸರ್ಕಾರ ನೇಮಕ ಮಾಡಿರುವ ಗುಂಟೂರು ಐ.ಜಿ ಸರ್ವಶ್ರೇಷ್ಠ ತ್ರಿಪಾಠಿ ನೇತೃತ್ವದ ವಿಶೇಷ ತಂಡವು (ಎಸ್‌ಐಟಿ) ತನ್ನ ಕೆಲಸ ಆರಂಭಿಸಿದೆ.