ಮಂಜೇಶ್ವರ : ನೂತನವಾಗಿ ನಿರ್ಮಾಣಗೊಂಡ ಷಟ್ಪಥ ರಸ್ತೆ ಪೂರ್ಣಗೊಳ್ಳುವಾಗ ರಸ್ತೆಗಳ ಇಕ್ಕೆಡೆಗಳಲ್ಲೂ ತಡೆಬೇಲಿ ಹಾಕಿರುವ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಅತ್ತಿಂದಿತ್ತ ಸಾಗುವುದು ಸವಾಲಾಗಿ ಪರಿಣಮಿಸಿತ್ತು. ಜೊತೆಗೆ ಕುಂಜತ್ತೂರು ಹೈಯರ್ ಸೆಕೆಂಡರಿ ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳು ರಸ್ತೆ ದಾಟುವುದು ಕಷ್ಟಕರವಾಗಿತ್ತು. ಈ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿರುವ ತೂಮಿನಾಡು ಜಂಕ್ಷನ್ ನಲ್ಲಿ ಒಂದು ಕಾಲ್ನಡೆ ಮೇಲ್ಸೇತುವೆ ನಿರ್ಮಿಸಬೇಕೆಂದು ಸ್ಥಳೀಯರ ಒಕ್ಕೊರಳಿನ ಬೇಡಿಕೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಸ್ಥಳೀಯರೆಲ್ಲರೂ ಜಾತಿ, ಧರ್ಮ ರಾಜಕೀಯ ಬದಿಗಿಟ್ಟು ನಡೆಸಿದ ಹೋರಾಟದ ಫಲವಾಗಿ ತೂಮಿನಾಡು ಮೇಲ್ಸೇತುವೆ ಇದೀಗ ಉದ್ಘಾಟನೆಯ ಹಂತವನ್ನು ತಲುಪಿದ್ದು, ಬಹುಕಾಲದಿಂದ ಜನರ ಬೇಡಿಕೆಯಾಗಿ ಇದ್ದ ಯೋಜನೆ ಇದೀಗ ಸಾಕಾರಗೊಳ್ಳುತ್ತಿದೆ.
ಸೇವಾ ಕ್ಷೇತ್ರಗಳಲ್ಲಿ ಆಧುನಿಕ ತಂತ್ರಜ್ಞಾನದ ಉಪಯೋಗ ಮತ್ತು ಸುಧಾರಿತ ಸಂಚಾರ ವ್ಯವಸ್ಥೆಗಳಿಗೆ ಇದು ಉತ್ತಮ ಉದಾಹರಣೆಯಾಗಿದೆ. ತೂಮಿನಾಡು ಮತ್ತು ಸುತ್ತಮುತ್ತಲಿನ ಭಾಗದ ಜನರಿಗೆ ರಸ್ತೆ ದಾಟಲು ಹಾಗೂ ಸಂಚಾರ ದಟ್ಟಣೆ ಕಡಿಮೆ ಮಾಡಲು ಸಹಾಯಕವಾಗಲಿರುವ ಈ ಸೇತುವೆ, ಅಲ್ಲಿನ ಸಾರ್ವಜನಿಕರಿಗೆ ಸಂಚಾರ ಸುಗಮಗೊಳಿಸಲು ಸಹಾಯ ಮಾಡಲಿದೆ.
ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಹೊಂದುತ್ತಿರುವ ತೂಮಿನಾಡು ಪ್ರದೇಶವಾಸಿಗಳಿಗೆ ಇದೊಂದು ವರದಾನವಾಗಿದೆ.