ಒಟ್ಟಾವ: 'ದೇಶದಲ್ಲಿ ನಡೆದ ಅಪರಾಧ ಚಟುವಟಿಕೆಗಳಲ್ಲಿ ಭಾರತದ ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರು ಭಾಗಿಯಾಗಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ' ಎಂದು ಕೆನಡಾ ಸ್ಪಷ್ಟಪಡಿಸಿದೆ.
ದೆಹಲಿಯಲ್ಲಿರುವ ಕೆನಡಾದ ಹೈಕಮಿಷನ್‌ನ ಆರು ಸದಸ್ಯರನ್ನು ವಾಪಸ್ ಕಳುಹಿಸುವುದಾಗಿ ಭಾರತ ಘೋಷಿಸಿದ ಬೆನ್ನಲೇ ಈ ಬೆಳವಣಿಗೆ ನಡೆದಿದೆ.
ಜನರ ಸುರಕ್ಷತೆಯನ್ನು ಖಾತರಿಪಡಿಸುವ ಉದ್ದೇಶದೊಂದಿಗೆ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (ಆರ್‌ಸಿಎಂಪಿ) ಕೆಲವೊಂದು ವಿಷಯಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದೆ. ಕೆನಡಾದಲ್ಲಿ ನಡೆಯುತ್ತಿರುವ ಗುಂಡಿನ ದಾಳಿ, ಮನೆಗಳ ಅತಿಕ್ರಮ ಪ್ರವೇಶ, ಸುಲಿಗೆ ಪ್ರಕರಣ ಮತ್ತು ಕೊಲೆಗಳ ಸರಣಿಗೆ ಕಡಿವಾಣ ತೊಡಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು' ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದೆ.
'ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಏಜೆಂಟ್‌ಗಳ ಪಾತ್ರ ಇದೆ ಎಂದು ಆರೋಪಿಸಿದಾಗ ನನ್ನಲ್ಲಿ ಯಾವುದೇ 'ಬಲವಾದ ಸಾಕ್ಷಿ ಪುರಾವೆಗಳು' ಇರಲಿಲ್ಲ' ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಈಚೆಗೆ ಒಪ್ಪಿಕೊಂಡಿದ್ದರು. ಆದರೆ 'ಗುಪ್ತಚರ ಮಾಹಿತಿ ಮಾತ್ರ ಇತ್ತು' ಎಂದು ಅವರು ಹೇಳಿದ್ದರು.
ಚುನಾವಣಾ ಪ್ರಕ್ರಿಯೆಗಳಲ್ಲಿ ಹಾಗೂ ಪ್ರಜಾತಾಂತ್ರಿಕ ಸಂಸ್ಥೆಗಳಲ್ಲಿ ವಿದೇಶಿ ಶಕ್ತಿಗಳ ಹಸ್ತಕ್ಷೇಪ ಕುರಿತ ವಿಚಾರಣೆಗೆ ಹಾಜರಾಗಿದ್ದ ಟ್ರುಡೊ, 'ಭಾರತದ ರಾಜತಾಂತ್ರಿಕರು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕುರಿತು ಭಿನ್ನಾಭಿಪ್ರಾಯ ಹೊಂದಿರುವ ಕೆನಡಾ ಪ್ರಜೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ, ಆ ಮಾಹಿತಿಯನ್ನು ಅವರು ಭಾರತ ಸರ್ಕಾರದ ಅತ್ಯುನ್ನತ ಹಂತಗಳಲ್ಲಿ ಇರುವವರಿಗೆ ಹಾಗೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಂತಹ ಕ್ರಿಮಿನಲ್ ಸಂಘಟನೆಗಳಿಗೆ ರವಾನಿಸುತ್ತಿದ್ದಾರೆ' ಎಂದು ಆರೋಪಿಸಿದ್ದರು.