ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ಪ್ರಮುಖರು ಸ್ವಾಗತಿಸಿದ್ದಾರೆ. ಭಾರತ-ಅಮೆರಿಕ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಟ್ರಂಪ್ ಅವರೊಂದಿಗೆ ಕೈಜೋಡಿಸಿ ಕೆಲಸ ಮಾಡುವ ಭರವಸೆಯನ್ನೂ ಅವರು ನೀಡಿದ್ದಾರೆ.
'ನಿರ್ಣಾಯಕ ಗೆಲುವು ಪಡೆದಿರುವ ಟ್ರಂಪ್ ಅವರಿಗೆ ಅಭಿನಂದನೆಗಳು. ಅಮೆರಿಕದ ಪಾಲಿನ ಸುವರ್ಣ ಯುಗದಲ್ಲಿ ನಾವಿದ್ದೇವೆ. ಪ್ರತಿಯೊಬ್ಬರಿಗೂ ಅನುಕೂಲ ಕಲ್ಪಿಸುವ ಉದ್ದೇಶದಿಂದ ಟ್ರಂಪ್ ಆಡಳಿತದ ಜತೆ ಕೆಲಸ ಮಾಡಲು ನಾವು ಬದ್ಧ' ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಬುಧವಾರ ಹೇಳಿದ್ದಾರೆ.
'ಭರ್ಜರಿ ಗೆಲುವಿಗಾಗಿ ಟ್ರಂಪ್ ಅವರಿಗೆ ಅಭಿನಂದನೆಗಳು. ಅಮೆರಿಕದ ಪ್ರಜೆಗಳು ಒಗ್ಗೂಡಲು, ನಮ್ಮ ದೇಶಕ್ಕಾಗಿ ಪ್ರಾರ್ಥಿಸಲು ಮತ್ತು ಶಾಂತಿಯುತ ಪರಿವರ್ತನೆಯ ಪ್ರಕ್ರಿಯೆ ಪ್ರಾರಂಭಿಸಲು ಈಗ ಕಾಲ ಕೂಡಿಬಂದಿದೆ' ಎಂದು ಭಾರತ ಮೂಲದ ಅಮೆರಿಕನ್ ಮಹಿಳೆ, ರಿಪಬ್ಲಿಕನ್ ಪಕ್ಷದ ನಾಯಕಿ ನಿಕ್ಕಿ ಹ್ಯಾಲೆ ಪ್ರತಿಕ್ರಿಯಿಸಿದ್ದಾರೆ.
ಲೂಸಿಯಾನಾದ ಮಾಜಿ ಗವರ್ನರ್ ಬಾಬಿ ಜಿಂದಾಲ್ ಅವರು ಟ್ರಂಪ್ ಗೆಲುವನ್ನು, 'ಅಮೆರಿಕದ ಪಾಲಿಗೆ ಮಹತ್ವದ ದಿನ' ಎಂದು ಬಣ್ಣಿಸಿದ್ದಾರೆ. 'ಸಂಭ್ರಮ ಆಚರಿಸಲು ಸ್ವಲ್ಪ ಸಮಯ ಮೀಸಲಿಡೋಣ. ನಮ್ಮ ದೇಶವನ್ನು ಸರಿಯಾದ ಹಾದಿಗೆ ಮರಳಿ ತರುವ ಕೆಲಸವನ್ನು ಆ ಬಳಿಕ ಶುರು ಮಾಡೋಣ' ಎಂದಿದ್ದಾರೆ.
ಉದ್ಯಮಿ ಹಾಗೂ ರಾಜಕಾರಣಿ ಎಂ.ಆರ್.ರಂಗಸ್ವಾಮಿ, ಕಮಲಾ ಹ್ಯಾರಿಸ್ ಪರ ಪ್ರಚಾರಕ್ಕೆ ಹಣ ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಜಯ್ ಜೈನ್ ಭತುರಿಯಾ ಮತ್ತು ಇಂಡಿಯನ್ ಅಮೆರಿಕನ್ ಫ್ರೆಂಡ್‌ಶಿಪ್ ಕೌನ್ಸಿಲ್‌ನ ಡಾ.ಕೃಷ್ಣಾರೆಡ್ಡಿ ಅವರೂ ಟ್ರಂಪ್ ಅವರನ್ನು ಅಭಿನಂದಿಸಿದ್ದಾರೆ.