ಛತ್ತೀಸ್‌ಗಢ: ಬಂಡುಕೋರರ ಪೀಡಿತ ಸುಕ್ಮಾ ಜಿಲ್ಲೆಯ ವಾರದ ಮಾರುಕಟ್ಟೆಯೊಂದರಲ್ಲಿ ಮಾವೋವಾದಿಗಳು ನಾಗರೀಕರಂತೆ ವೇಷ ಧರಿಸಿ ಹರಿತವಾದ ಆಯುಧಗಳಿಂದ ದಾಳಿ ನಡೆಸಿದ್ದು, ಛತ್ತೀಸ್‌ಗಢದ ಇಬ್ಬರು ಪೊಲೀಸ್ ಪೇದೆಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಾಗರಗುಂದ ಗ್ರಾಮದ ಮಾರುಕಟ್ಟೆಯಲ್ಲಿ ಭದ್ರತಾ ಕಾರ್ಯಕ್ಕೆ ಪೊಲೀಸರನ್ನು ನಿಯೋಜಿಸಿದ್ದಾಗ ಮಾವೋವಾದಿಗಳು ಇಬ್ಬರು ಸಿಬ್ಬಂದಿಯ ಸೇವಾ ರೈಫಲ್‌ಗಳನ್ನು ಕಿತ್ತುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮಾವೋವಾದಿಗಳ (ಸಾಮಾನ್ಯವಾಗಿ ನಾಲ್ಕು-ಐದು ಸಿಬ್ಬಂದಿಗಳನ್ನು ಒಳಗೊಂಡಿರುವ) ಸಣ್ಣ 'ತಂಡ' ಇಬ್ಬರು ಕಾನ್‌ಸ್ಟೆಬಲ್‌ಗಳಾದ ಕರ್ತಮ್ ದೇವ ಮತ್ತು ಸೋಧಿ ಕನ್ನ ಮೇಲೆ ಹಠಾತ್ತನೆ ಹರಿತವಾದ ಆಯುಧಗಳಿಂದ ದಾಳಿ ಮಾಡಿ ನಂತರ ಅವರ ಇನ್ಸಾಸ್ ರೈಫಲ್‌ಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಗಾಯಗೊಂಡ ಇಬ್ಬರು ಕಾನ್‌ಸ್ಟೆಬಲ್‌ಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ನಂತರ ಅವರನ್ನು ವಿಮಾನದಲ್ಲಿ ರಾಯ್‌ಪುರಕ್ಕೆ ಕರೆದೊಯ್ಯಲಾಯಿತು ಮತ್ತು ರಾಜ್ಯದ ರಾಜಧಾನಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.