ಕಾಸರಗೋಡು: ನನ್ನ ಭೂಮಿ ಇಂಟಿಗ್ರೇಟೆಡ್ ಪೋರ್ಟಲ್ ಮೂಲಕ ಕಂದಾಯ, ಸರ್ವೆ ಮತ್ತು ನೋಂದಣಿ ಇಲಾಖೆಗಳ ಸೇವೆಗಳನ್ನು ಆನ್‍ಲೈನ್‍ನಲ್ಲಿ ಲಭ್ಯವಾಗುವಂತೆ ಮಾಡಿದ ದೇಶದ ಮೊದಲ ಗ್ರಾಮವಾದ ಕಾಸರಗೋಡು ಜಿಲ್ಲೆಯ ಕುಂಬಳೆಯ ಉಜಾರ್-ಉಳುವಾರ್ ಗ್ರಾಮದ ಡಿಜಿಟಲ್ ಸಮೀಕ್ಷೆ ಚಟುವಟಿಕೆಗಳನ್ನು ನಿರ್ವಹಿಸಿದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ತ್ವರಿತ ಗತಿಯಲ್ಲಿ ಸಾಗುತ್ತಿರುವ ಜಿಲ್ಲೆಯ ಡಿಜಿಟಲ್ ಸಮೀಕ್ಷೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಇನ್ಭಾಶೇಖರ್ ಸೂಚಿಸಿದರು. ಡಿಜಿಟಲ್ ಸಮೀಕ್ಷೆ ಜಿಲ್ಲಾ ಮಟ್ಟದ ಪರಿಶೀಲನೆ ಅಕ್ಟೋಬರ್ ನಲ್ಲಿ ನಡೆದಿತ್ತು. ಭೂಕಂದಾಯ ಉಪ ಜಿಲ್ಲಾಧಿಕಾರಿ ಕೆ.ರಾಜನ್, ಸರ್ವೆ ಸಹಾಯಕ ನಿರ್ದೇಶಕ ಆಸಿಫ್ ಅಲಿಯಾರ್ ಮಾತನಾಡಿದರು. ಸಾರ್ವಜನಿಕರ ಸಂಪೂರ್ಣ ಸಹಕಾರವನ್ನು ಖಾತ್ರಿಪಡಿಸಿಕೊಂಡು ಭೂ ರಹಿತರಿಗೆ ಮಂಜೂರಾತಿ ನೀಡುವ ಯೋಜನೆಯನ್ನು ಯಶಸ್ವಿಗೊಳಿಸುವ ಮೂಲಕ ಡಿಜಿಟಲ್ ಸಮೀಕ್ಷೆಯನ್ನು ದೂರುಗಳಿಲ್ಲದೆ ಮತ್ತು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿತ್ತು.
ಇದಕ್ಕಾಗಿ ಜಿಲ್ಲೆಯ ಕಂದಾಯ ಮತ್ತು ಸರ್ವೆ ಅಧಿಕಾರಿಗಳು ಒಗ್ಗೂಡಿ ಕೆಲಸ ಮಾಡಿ ಸಾಧ್ಯವಾದಷ್ಟು ತಾಂತ್ರಿಕ ಅಡಚಣೆಗಳನ್ನು ಜಿಲ್ಲೆಯಲ್ಲೇ ಪರಿಹರಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ತಹಸೀಲ್ದಾರರು, ಸರ್ವೆ ಮೇಲ್ವಿಚಾರಕರು, ಗ್ರಾಮಾಧಿಕಾರಿಗಳು, ಮುಖ್ಯ ಸರ್ವೇಯರ್‍ಗಳು ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.