ನವದೆಹಲಿ: ಅನಿಯತ ಅಥವಾ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದರಿಂದ ಯಕೃತ್ತು- ಮಿದುಳಿನ ನಡುವಣ ಸಂವಹನಕ್ಕೆ ಅಡ್ಡಿ ಉಂಟಾಗುತ್ತದೆ ಎಂಬುದು ಹೊಸ ಅಧ್ಯಯನದಲ್ಲಿ ಕಂಡುಬಂದಿದೆ.
ಹೊತ್ತಲ್ಲದ ಹೊತ್ತಲ್ಲಿ ಮತ್ತು ಅತಿಯಾಗಿ ತಿನ್ನುವುದರಿಂದ ಆರೋಗ್ಯದ ಮೇಲೆ ಉಂಟಾಗುವ ಕೆಟ್ಟ ಪರಿಣಾಮಗಳನ್ನು ತಪ್ಪಿಸುವುದಕ್ಕೆ ಈ ಅಧ್ಯಯನ ವರದಿ ನೆರವಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.
ರೂಢಿಯಲ್ಲದ ಹೊತ್ತಲ್ಲಿ ಕೆಲಸ ಮಾಡುವುದರಿಂದ ಯಕೃತ್ತಿನ ಚಟುವಟಿಕೆ ಮತ್ತು ಅದು ಮಿದುಳಿಗೆ ಸಂದೇಶ ರವಾನಿಸುವ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಕೊಂಡಿದ್ದಾರೆ.
ಯಕೃತ್ ಕಳುಹಿಸುವ ಸಂದೇಶದಲ್ಲಿ ಏರುಪೇರು ಉಂಟಾದಾಗ ಮಿದುಳು ಇನ್ನಷ್ಟು ತಿನ್ನುವಂತೆ ಪ್ರಚೋದಿಸುತ್ತದೆ. ಇದರಿಂದ ಆ ವ್ಯಕ್ತಿಗೆ ಹೊತ್ತಲ್ಲದ ಹೊತ್ತಲ್ಲಿ ತಿನ್ನಬೇಕು ಎನಿಸುತ್ತದೆ.
ಯಕೃತ್ತು, ಮಿದುಳಿಗೆ ಸಂದೇಶ ರವಾನಿಸುವ ನರಗಳನ್ನು ಗುರಿಯಾಗಿಸಿಕೊಂಡು ಚಿಕಿತ್ಸೆ ನೀಡಿದರೆ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರಲ್ಲಿ ಅತಿಯಾಗಿ ತಿನ್ನುವ ಸಮಸ್ಯೆ ಕಂಡುಬರುವುದನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದು ಅಧ್ಯಯನ ತಂಡ ಹೇಳಿದೆ.
ಅಧ್ಯಯನ ತಂಡವು ಇದಕ್ಕಾಗಿ ಇಲಿಗಳ ಮೇಲೆ ಪ್ರಯೋಗ ನಡೆಸಿದೆ. ಸಂಶೋಧಕರು ಇಲಿಗಳ ಆರ್‌ಇವಿ-ಇಆರ್‌ಬಿ ಜೀನುಗಳನ್ನು ಆಯ್ಕೆಮಾಡಿಕೊಂಡಿದ್ದರು. ಈ ಜೀನುಗಳು ಮನುಷ್ಯರ ಜೀನುಗಳಲ್ಲಿರುವ ಆನುವಂಶಿಕ ಲಕ್ಷಣ ಮತ್ತು ಜೈವಿಕ ಪ್ರಕ್ರಿಯೆಯನ್ನು ಹೊಂದಿವೆ. ಈ ಜೀನುಗಳನ್ನು ನಿಷ್ಕ್ರಿಯಗೊಳಿಸಿದಾಗ ಇಲಿಗಳ ಯಕೃತ್ತಿನ ಕೆಲಸದಲ್ಲಿ ಏರುಪೇರು ಉಂಟಾಗಿದೆ. ಇದರಿಂದ ಆಹಾರ ಸೇವನೆ ಕ್ರಮದಲ್ಲಿ ನಾಟಕೀಯ ಬದಲಾವಣೆಗಳು ಕಂಡುಬಂದವು ಎಂದು ಅಧ್ಯಯನ ವರದಿ ತಿಳಿಸಿದೆ.