ನವದೆಹಲಿ: ಹಿಂಸಾತ್ಮಕ ಕೃತ್ಯಗಳು, ಭಾರತದ ಸಾರ್ವಭೌಮತ್ವ, ಸಹಬಾಳ್ವೆಗೆ ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿ ಭಾಗಿಯಾದ ಕಾರಣ ಮೇಘಾಲಯ ಮೂಲದ ಬಂಡುಕೋರರ ತಂಡ ಹಿನ್ನಿವ್ಟ್ರೆಪ್ ನ್ಯಾಷನಲ್ ಲಿಬರೇಶನ್ ಕೌನ್ಸಿಲ್ (ಎಚ್‌ಎನ್‌ಎಲ್‌ಸಿ) ಅನ್ನು ಐದು ವರ್ಷಗಳ ಕಾಲ ನಿಷೇಧಿಸಲಾಗಿದೆ.

ಖಾಸಿ ಹಾಗೂ ಜೈಂತಿಯಾ ಆದಿವಾಸಿಗಳು ಹೆಚ್ಚಾಗಿ ವಾಸಿಸುವ ಮೇಘಾಲಯದ ಪ್ರದೇಶಗಳನ್ನು ಪ್ರತ್ಯೇಕಿಸುವುದಾಗಿ ಎಚ್‌ಎನ್‌ಎಲ್‌ಸಿ ಘೋಷಿಸಿದೆ. ಅಲ್ಲದೆ ಸಂಘಟನೆಗೆ ಹಣ ವಸೂಲಿ ಮಾಡಲು ನಾಗರಿಕರಿಗೆ ಬೆದರಿಕೆ ಹಾಕುವುದನ್ನು ಮುಂದುವರೆಸಿದೆ ಎಂದು ಗೃಹ ಸಚಿವಾಲಯ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
ಸುಲಿಗೆ ಮತ್ತು ಬೆದರಿಕೆ ಹಾಕಲು ಈ ಗುಂಪು ಈಶಾನ್ಯ ಭಾಗದ ಬಂಡುಕೋರರ ತಂಡದೊಂದಿಗೆ ಸಂಪರ್ಕ ಹೊಂದಿದೆ ಹಾಗೂ 48 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದೆ. ಇದರಲ್ಲಿ 2019ರಿಂದ 2024ರವರೆಗೆ ಸ್ಫೋಟಕಗಳನ್ನು ಸಿಡಿಸಿದ್ದೂ ಸೇರಿದೆ ಎಂದು ತಿಳಿಸಲಾಗಿದೆ. ಈ ಅವಧಿಯಲ್ಲಿ ಗುಂಪಿನ 73 ಸದಸ್ಯರನ್ನು ಭದ್ರತಾ ಪಡೆಗಳು ಬಂಧಿಸಿದ್ದವು.
ತಕ್ಷಣಕ್ಕೆ ನಿಯಂತ್ರಿಸದಿದ್ದರೆ ಎಚ್‌ಎನ್‌ಎಲ್‌ಸಿ ಗುಂಪು ಶಸ್ತ್ರಾಸ್ತ್ರಗಳನ್ನು ಹೊಂದಬಹುದು ಹಾಗೂ ವಿಸ್ತರಣೆಯಾಗಬಹುದು. ನಾಗರಿಕರು ಹಾಗೂ ಭದ್ರತಾ ಪಡೆಗಳ ಜೀವ ಹಾನಿ ಹಾಗೂ ಆಸ್ತಿಪಾಸ್ತಿ ಹಾನಿ ಮಾಡಬಹುದು. ಆ ಮೂಲಕ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ಹೆಚ್ಚಿಸಬಹುದು ಎಂದು ಸಚಿವಾಲಯ ತಿಳಿಸಿದೆ.