ಬ್ರಿಸ್ಬೇನ್: ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ಭಾರತದ ಹೊಸ ದೂತವಾಸ ಕಚೇರಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸೋಮವಾರ ಉದ್ಘಾಟಿಸಿದರು.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೈಶಂಕರ್, 'ಭಾರತೀಯ ದೂತವಾಸವನ್ನು ಬ್ರಿಸ್ಬೇನ್‌ನಲ್ಲಿ ಉದ್ಘಾಟಿಸಲಾಗಿದೆ. ಇದು ಭಾರತದೊಂದಿಗಿನ ಸಂಬಂಧ ಬಲಪಡಿಸುವುದು ಮಾತ್ರವಲ್ಲದೆ ಶಿಕ್ಷಣ ಕ್ರೇತ್ರದಲ್ಲೂ ಮುಂದುವರಿಯಲು ಸಹಾಯಕವಾಗಲಿದೆ ಎಂದು ಬರೆದುಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಬ್ರಿಸ್ಬೇನ್ ರಾಜ್ಯದ ಸಚಿವರಿಗೆ ಧನ್ಯವಾದ ತಿಳಿಸಿದ್ದಾರೆ.
ಇದು ಆಸ್ಟ್ರೇಲಿಯಾದಲ್ಲಿರುವ ನಾಲ್ಕನೇ ಭಾರತೀಯ ಧೂತವಾಸ ಕಚೇರಿಯಾಗಿದೆ. ಉಳಿದ ಮೂರು ಸಿಡ್ನಿ, ಮೆಲ್ಬೋರ್ನ್ ಮತ್ತು ಪರ್ತ್ ರಾಜ್ಯಗಳಲ್ಲಿದೆ.
ಉದ್ಘಾಟನೆಗೂ ಮುನ್ನ ಜೈಶಂಕರ್, ರಾಜ್ಯದ ರೊಮಾ ಸ್ಟ್ರೀಟ್‌ನಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆಗೆ ಗೌರವ ಸಲ್ಲಿಸಿ, ಗಾಂಧೀಜಿ ಅವರ ಶಾಂತಿ ಮತ್ತು ಸಾಮರಸ್ಯದ ಸಂದೇಶ ಪ್ರಪಂಚದಾದ್ಯಂತ ಪ್ರತಿಧ್ವನಿಸುತ್ತಿದೆ ಎಂದರು.
ಎರಡು ದೇಶಗಳ ಪ್ರವಾಸ ಕೈಗೊಂಡಿರುವ ಜೈಶಂಕರ್, ಭಾನುವಾರ ಆಸ್ಟ್ರೇಲಿಯಾಗೆ ಬಂದಿಳಿದರು. ಆಸ್ಟ್ರೇಲಿಯಾ ಭೇಟಿಯ ಬಳಿಕ ಸಿಂಗಪುರಕ್ಕೆ ತೆರಳಲಿದ್ದಾರೆ.