ಪ್ರಯಾಗ್ ರಾಜ್: ಜನವರಿ ತಿಂಗಳಿನಿಂದ ಆರಂಭವಾಗುವ ಕುಂಭಮೇಳಕ್ಕೆ ಸಂಗಮ ನಗರಿ ಪ್ರಯಾಗ್ ರಾಜ್ ಸಜ್ಜುಗೊಳ್ಳುತ್ತಿದೆ.
ಯಾತ್ರಾರ್ಥಿಗಳ ಸೇವೆಗೆ ನಿಯೋಜನೆಗೊಳ್ಳಲಿರುವ ಪೊಲೀಸ್ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿಯ ಭಾಗವಾಗಿ ಪೊಲೀಸ್ ಸಿಬ್ಬಂದಿಗಳು ಸಾತ್ವಿಕ ಆಹಾರ, ಮದ್ಯಪಾನವನ್ನು ವರ್ಜನೆ ಮೊರೆ ಹೋಗುತ್ತಿದ್ದಾರೆ.
ಜ.13 ರಿಂದ ಫೆ.26 ವರೆಗೆ ಮಹಾಕುಂಭಮೇಳ ನಡೆಯಲಿದೆ. ಹಿರಿಯ ಪೊಲೀಸ್ ಅಧೀಕ್ಷಕ (ಕುಂಭ) ರಾಜೇಶ್ ದ್ವಿವೇದಿ ಅವರು ಭದ್ರತೆಯನ್ನು ನಿರ್ವಹಿಸುವುದರ ಜೊತೆಗೆ ಯಾತ್ರಾರ್ಥಿಗಳಿಗೆ ಸ್ವಾಗತಾರ್ಹ ವಾತಾವರಣವನ್ನು ಬೆಳೆಸುವುದು ಪೊಲೀಸರ ಪ್ರಾಥಮಿಕ ಗಮನವಾಗಿದೆ ಎಂದು ಹೇಳಿದ್ದಾರೆ.
ಭಕ್ತರಿಗೆ ಆಹ್ಲಾದಕರ ಅನುಭವವನ್ನು ನೀಡುವುದು ನಮ್ಮ ಉದ್ದೇಶವಾಗಿದೆ ಮತ್ತು ಪೊಲೀಸರು ಆತ್ಮೀಯತೆಯಿಂದ ವರ್ತಿಸುತ್ತಾರೆ-- ಕಾನೂನು ಪರಿಪಾಲಕರಾಗಿ ಮಾತ್ರವಲ್ಲದೆ ನಂಬಿಕೆಯ ಸೇವಕರಂತೆ ನಡೆದುಕೊಳ್ಳಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮಹಾಕುಂಭಕ್ಕೆ ನಿಯೋಜನೆಗೊಳ್ಳಲಿರುವ ಪೊಲೀಸ್ ಸಿಬ್ಬಂದಿಗಳು ಮೇಳದ ಪ್ರದೇಶದಲ್ಲಿ ಗೊತ್ತುಪಡಿಸಿದ ಸೌಲಭ್ಯದಲ್ಲಿ ನಡವಳಿಕೆ-ಕೇಂದ್ರಿತ ತರಬೇತಿಯನ್ನು ಪಡೆಯುತ್ತಿದ್ದಾರೆ. ಶಿಷ್ಟಾಚಾರ ಮತ್ತು ಸಾರ್ವಜನಿಕ ಸೇವೆಯಲ್ಲಿ ಪಾಠಗಳನ್ನು ಕಲಿಸಲು ಬಾಹ್ಯ ತರಬೇತುದಾರರನ್ನು ಸಹ ಆಹ್ವಾನಿಸಲಾಗುತ್ತಿದೆ.
ಇಲ್ಲಿಯವರೆಗೆ 1,500 ಪೊಲೀಸ್ ಸಿಬ್ಬಂದಿ ತರಬೇತಿ ಪೂರ್ಣಗೊಳಿಸಿದ್ದಾರೆ. ಮೇಳ ಪ್ರಾರಂಭವಾಗುವ ಹೊತ್ತಿಗೆ 40,000 ಸಿಬ್ಬಂದಿ ತರಬೇತಿಯನ್ನು ಪೂರ್ಣಗೊಳಿಸುತ್ತಾರೆ.
ತರಬೇತಿ ಕಾರ್ಯಕ್ರಮದ ಉಸ್ತುವಾರಿ ಅತುಲ್ ಕುಮಾರ್ ಸಿಂಗ್ ಮಾತನಾಡಿ, 21 ದಿನಗಳ ಮಾಡ್ಯೂಲ್ ನಂತರ 700 ಪೊಲೀಸ್ ಸಿಬ್ಬಂದಿ ಏಕಕಾಲದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಮೇಳದ ವೇಳೆ ನಿಯೋಜನೆಗೊಳ್ಳಲಿರುವ ಮಥುರಾದ ಹೆಡ್ ಕಾನ್ ಸ್ಟೇಬಲ್ ಸತೀಶ್ ಕುಮಾರ್ ಯಾದವ್ ಮುಂತಾದ ಸಿಬ್ಬಂದಿ ತರಬೇತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.