ಬದಿಯಡ್ಕ: 2025 ಮೇ 12ರಂದು ನೆಕ್ರಾಜೆ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಧನ್ವಂತರೀ ಪುತ್ರಕಾಮೇಷ್ಠಿ ಯಾಗ ನಡೆಯಲಿದೆ. ಧನ್ವಂತರೀ ಪುತ್ರಕಾಮೇಷ್ಠಿ ಯಾಗ ಸಮಿತಿಯ ನೇತೃತ್ವದಲ್ಲಿ ಜರಗಲಿರುವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಭಾನುವಾರ ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು.
ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳು ಶ್ರೀದೇವರ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿ ಯಾಗ ಯಜ್ಞಾದಿಗಳಿಂದ ಪರಿಸರವು ಶುಭ್ರಗೊಂಡು ಸುಭಿಕ್ಷೆ ನೆಲೆಯಾಗುತ್ತದೆ. ಕುಂಬಳೆ ಸೀಮೆಯಲ್ಲಿ ಪ್ರಾಕೃತಿಕವಾಗಿ ಯಾವುದೇ ಕ್ಷೋಭೆಯಿಲ್ಲದಂತೆ ಆಗಬೇಕು. ಪುತ್ರಕಾಮೇಷ್ಠಿಯ ಪ್ರಭಾವದಿಂದ ಎಲ್ಲಾ ಮನೆಗಳಲ್ಲೂ ಸಂತತಿ ಹೆಚ್ಚಾಗಿ ಸಮೃದ್ಧ ಕುಟುಂಬವಾಗಲಿ ಎಂದು ಹಾರೈಸಿದರು.
ಯಾಗ ಸಮಿತಿಯ ಅಧ್ಯಕ್ಷ ರಘುನಾಥ ಪೈ ಕುಂಬಳೆ ಅಧ್ಯಕ್ಷತೆ ವಹಿಸಿದ್ದರು. ಯಾಗಸಮಿತಿಯ ಮಹಾಪೋಷಕರಾದ ಮಧುಸೂದನ ಆಯರ್ ಮಂಗಳೂರು, ಶಿವಶಂಕರ ನೆಕ್ರಾಜೆ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಆಚಾರ್ ಎಂ.ಬಿ., ಕಾರ್ಯದರ್ಶಿ ಗಣೇಶವತ್ಸ ಮುಳ್ಳೇರಿಯ ಉಪಸ್ಥಿತರಿದ್ದು ಮಾತನಾಡಿದರು. ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಪ್ರಾಸ್ತಾವಿಕ ಮಾತುಗಳನ್ನಾಡಿ, 2015ರಲ್ಲಿ ವೇದಮೂರ್ತಿ ಪಳ್ಳತ್ತಡ್ಕ ಪರಮೇಶ್ವರ ಭಟ್ಟರ ನೇತೃತ್ವದಲ್ಲಿ ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪುತ್ರಕಾಮೇಷ್ಠಿ ಯಾಗ ನಡೆಸಲಾಗಿತ್ತು. ಪರಿಕ್ರಮ ಯಾತ್ರೆಯ ನಿಮಿತ್ತ ನಡೆದ ಯಾಗದಲ್ಲಿ 97 ದಂಪತಿಗಳು ಭಾಗವಹಿಸಿದ್ದರು. ಯಾಗದ ಫಲವಾಗಿ 70 ಶೇಕಡಾ ಮಂದಿ ಸಂತತಿಯ ಭಾಗ್ಯವನ್ನು ಪಡೆದಿದ್ದಾರೆ. ಈ ವರ್ಷದ ಯಾಗದಲ್ಲಿ ಆಯುರ್ವೇದ, ಯೋಗ ಮತ್ತು ಯಾಗವನ್ನು ಅಳವಡಿಸಿಕೊಳ್ಳಲಾಗಿದೆ ಎಂದರು.
ನೆಕ್ರಾಜೆ ಕ್ಷೇತ್ರದ ಅಧ್ಯಕ್ಷ ವಿ ಡಿ ಶೆಟ್ಟಿ, ಉಪಾಧ್ಯಕ್ಷ ರಾಮಚಂದ್ರ ಬಲ್ಲಾಳ್. ನಿತ್ಯಾನಂದ ನೆಲ್ಲಿತ್ತಲ. ಕೋಶಾಧ್ಯಕ್ಷ ಬಾಲಕೃಷ್ಣ ನೀರ್ಚಾಲ್. ಹಾಗೂ ಗೋಪಾಲಕೃಷ್ಣ ಭಟ್, ಮಹಿಳಾ ಸಮಿತಿ, ಯುವಜನ ಸಮಿತಿಯ ಸದಸ್ಯರು ಭಾಗವಹಿಸಿದ್ದರು. ಸೀತಾರಾಮ ಭಟ್ ಮವ್ವಾರು ಸ್ವಾಗತಿಸಿದರು.