ಕೋಲ್ಕತ್ತ: ಹಿಂದೂ ಸಮುದಾಯದ ಇಬ್ಬರು ಶಾಸಕರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಆದರೆ, ಅಂತಹ ಕಿಡಿಗೇಡಿಗಳನ್ನು ಸರ್ಕಾರವು ಮತ ಗಳಿಕೆಗಾಗಿ ರಕ್ಷಿಸುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಕಿಡಿಕಾರಿದ್ದಾರೆ.
ಹಿಂದೂ ಶಾಸಕರಾದ ಉಷಾ ರಾಣಿ ಮಂಡಲ್ ಹಾಗೂ ಸುಕುಮಾರ್ ಮಹತಾ ಅವರು ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಸೇರಿದವರು.
ಶಾಸಕರು ಗಾಯಗೊಂಡಿರುವ ವಿಡಿಯೊಗಳನ್ನೂ ಹಂಚಿಕೊಂಡಿರುವ ಅಧಿಕಾರಿ, 'ನೀವು ರಾಕ್ಷಸರನ್ನು ಸೃಷ್ಟಿಸಿದ್ದೀರಿ. ಇದೀಗ ಅವರು, ನಿಮ್ಮ ವಿರುದ್ಧವೇ ತಿರುಗಿಬಿದ್ದಿದ್ದಾರೆ' ಎನ್ನುವ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪಕ್ಷದತ್ತ ಚಾಟಿ ಬೀಸಿದ್ದಾರೆ.
'ಮಮತಾ ಬ್ಯಾನರ್ಜಿ ಅವರ ಆಡಳಿತವು ಮತ ಬ್ಯಾಂಕ್ ರಾಜಕಾರಣಕ್ಕಾಗಿ ಒಂದು ವರ್ಗದ ಜನರನ್ನು ದೀರ್ಘಕಾಲದಿಂದ ಓಲೈಸುತ್ತಾ ಬಂದಿದೆ. ಹಾಗಾಗಿ, ಆ ವರ್ಗವೂ ತಮ್ಮ ಸಂಪೂರ್ಣ ಬೆಂಬಲವನ್ನು ಟಿಎಂಸಿಗೆ ನೀಡುತ್ತಿದೆ. ಅದಕ್ಕೆ ಬದಲಾಗಿ, ರಾಜ್ಯದಲ್ಲಿರುವ ಬಹುಸಂಖ್ಯಾತರನ್ನು ಗುರಿಯಾಗಿಸಿ ದಾಳಿ ನಡೆಸಿದರೂ, ಶಿಕ್ಷೆಯಿಂದ ಮುಕ್ತರಾಗುತ್ತಾರೆ. ಇಂತಹ ಶಕ್ತಿಗಳು ಟಿಎಂಸಿ ಸರ್ಕಾರದ ಭಾಗವಾಗಿರುವುದರಿಂದ, ಪೊಲೀಸ್ ಮತ್ತು ಆಡಳಿತ ಮೂಕ ಪ್ರೇಕ್ಷಕರಂತಾಗುತ್ತವೆ. ಈ ಶಕ್ತಿಗಳು, ವಿರೋಧ ಪಕ್ಷಗಳ ನಾಯಕರ ವಿರುದ್ಧ, ಅದರಲ್ಲೂ ಚುನಾವಣೆಗಳ ಸಂದರ್ಭದಲ್ಲಿ ಶಸ್ತ್ರ ಪ್ರಯೋಗಿಸುತ್ತವೆ' ಎಂದು ದೂರಿದ್ದಾರೆ.
ಮುಂದುವರಿದು, 'ಇದೀಗ, ಅವರೇ (ಟಿಎಂಸಿ ಶಾಸಕರೇ) ಹೇಳುತ್ತಿರುವಂತೆ, ಇಂತಹ ಶಕ್ತಿಗಳು ಟಿಎಂಸಿಯಲ್ಲಿರುವ ಹಿಂದೂ ಶಾಸಕರನ್ನೇ ಗುರಿಯಾಗಿಸಲು ಪ್ರಾರಂಭಿಸಿವೆ' ಎಂದು ಕಿಡಿಕಾರಿದ್ದಾರೆ.
'ಘೋರ ದುರಂತ' ಕಾದಿದೆ ಎಂದು ರಾಜ್ಯದ ಜನರಿಗೆ ಎಚ್ಚರಿಕೆ ನೀಡಿರುವ ಅವರು, 'ಈ ರಾಕ್ಷಸರನ್ನು ಪಳಗಿಸಿ ಮತ್ತೆ ಬಾಟಲಿಯಲ್ಲಿ ಬಂಧಿಸುವುದು ಬಿಜೆಪಿಯಿಂದಷ್ಟೇ ಸಾಧ್ಯ' ಎಂದು ಹೇಳಿಕೊಂಡಿದ್ದಾರೆ.
'ವಾಹನದಿಂದ ಇಳಿಸಿ ಹಲ್ಲೆ'
ತಮ್ಮನ್ನು ಬಲವಂತವಾಗಿ ಕಾರಿನಿಂದ ಇಳಿಸಿ ಹಲ್ಲೆ ಮಾಡಲಾಯಿತು. ಘಟನೆ ಸಂದರ್ಭದಲ್ಲಿ ಹಲವು ಬಾರಿ ಗುಂಡು ಹಾರಿಸಲಾಯಿತು ಎಂದು ಉಷಾ ರಾಣಿ ಮಂಡಲ್ ಪೊಲೀಸರಿಗೆ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದಲ್ಲಿ ಪಕ್ಷದಿಂದ ಅಮಾನತುಗೊಂಡಿರುವ ನಾಯಕರೊಬ್ಬರು ಈ ದಾಳಿಯ ಹಿಂದೆ ಇದ್ದಾರೆ ಎಂದು ಆರೊಪಿಸಿದ್ದಾರೆ.
'ಕಾಳಿ ಪೂಜಾ ಮಂಟಪ ಉದ್ಘಾಟಿಸಿ ಹಿಂದಿರುಗುತ್ತಿದ್ದಾಗ ಕೆಲವು ದುಷ್ಕರ್ಮಿಗಳು ನನ್ನ ವಾಹನದ ಮೇಲೆ ದಾಳಿ ಮಾಡಿದ್ದಾರೆ. ನಮ್ಮ ಪಕ್ಷದ ಕೆಲವು ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿರುವ ಒಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ಸುಕುಮಾರ್ ಹೇಳಿದ್ದಾರೆ.
ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈವರೆಗೆ ಇಬ್ಬರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.