ಮೀರತ್: ಹಲವು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ರೌಡಿ ಶೀಟರ್ ಒಬ್ಬನನ್ನು, ಅವನ ಮದುವೆಗೆ ಇನ್ನೇನು ನಾಲ್ಕು ದಿನ ಬಾಕಿ ಇರುವಾಗಲೇ ಪೊಲೀಸರು ಗಡಿಪಾರು ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.
ಇಸ್ಮಾಯಿಲ್ ನಗರದ ನಟೋರಿಯಸ್ ಕ್ರಿಮಿನಲ್ ಆಗಿರುವ ಸಲ್ಮಾನ್ ಎಂಬಾತನನ್ನು ಮೀರತ್ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.
ಸಲ್ಮಾನ್ ಮದುವೆ ನವೆಂಬರ್ 26ಕ್ಕೆ ನಿಗದಿಯಾಗಿತ್ತು. ಇದಕ್ಕಾಗಿ ಆತ ಹಾಗೂ ಆತನ ಕುಟುಂಬದವರು ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದರು. ಆದರೆ, ಮೀರತ್ ಜಿಲ್ಲಾ ಪೊಲೀಸರು ಗಡಿಪಾರು ಶಿಕ್ಷೆ ಜಾರಿಗೊಳಿಸುವ ಮೂಲಕ ಸಲ್ಮಾನ್‌ಗೆ ದೊಡ್ಡ ಶಾಕ್ ಕೊಟ್ಟಿದ್ದಾರೆ.
ಸಲ್ಮಾನ್ ಕೊಲೆ, ಕೊಲೆ ಯತ್ನ, ಬೆದರಿಕೆ, ದರೋಡೆ ಸೇರಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಜೈಲಿನಲ್ಲಿದ್ದ ಈತ ಜಾಮೀನಿನ ಮೇಲೆ ಇತ್ತೀಚೆಗೆ ಬಿಡುಗಡೆಯಾಗಿದ್ದ ಎಂದು ಮೀರತ್ ಎಎಸ್‌ಪಿ ಆಯುಷ್ ವಿಕ್ರಮ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಸಲ್ಮಾನ್‌ನ್ನು ಮೀರತ್ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಮುಂದಿನ ಆರು ತಿಂಗಳು ಆತ ಮೀರತ್ ಜಿಲ್ಲೆಯಲ್ಲಿ ಕಾಣಿಸಿಕೊಳ್ಳುವ ಹಾಗಿಲ್ಲ ಎಂದು ಅವರು ಹೇಳಿದ್ದಾರೆ.
ಬುಲಂದಶಹರ್‌ನ ಸಿಕಂದರಾಬಾದ್ ಎಂಬಲ್ಲಿನ ಮದುವೆ ಹಾಲ್‌ನಲ್ಲಿ ಈ ರೌಡಿಶೀಟರ್‌ನ ಮದುವೆಗೆ ಎಲ್ಲ ತಯಾರಿ ನಡೆದಿತ್ತು. ಆದರೆ, ಪೊಲೀಸರ ಕ್ರಮದಿಂದ ಆತನ ಕುಟುಂಬದವರು ಆತಂಕಗೊಂಡಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.