ಪತ್ತನಂತಿಟ್ಟ: ಶಬರಿಮಲೆಯಲ್ಲಿ ಮಂಡಲ ಪೂಜಾ ಮಹೋತ್ಸವಕ್ಕಾಗಿ ಇಂದು(ನ. 15) ಗರ್ಭಗುಡಿ ಬಾಗಿಲು ತೆರೆಯಲಾಗುವುದು. ಡಿ. 26ರಂದು ಮಂಡಲಪೂಜೆ ನಡೆಯುವುದು. ಅಂದು ರಾತ್ರಿ 11ಕ್ಕೆ ಹರಿವರಾಸನಂನೊಂದಿಗೆ ಗರ್ಭಗುಡಿ ಬಾಗಿಲು ಮುಚ್ಚಲಾಗುವುದು. ನಂತರ ಮಕರಜ್ಯೋತಿ ಪೂಜೆಗಾಗಿ ಡಿ. 30ರಂದು ಗರ್ಭಗುಡಿ ಬಾಗಿಲು ತೆರೆಯಲಾಗುವುದು.
ಶಬರಿಮಲೆ ಹಾಲಿ ಪ್ರಧಾನ ಅರ್ಚಕ ಪಿ.ಎನ್ ಮಹೇಶ್ ನಂಬೂದಿರಿ ದೇವಸ್ಥಾನದ ತಂತ್ರಿವರ್ಯರ ಉಪಸ್ಥಿತಿಯಲ್ಲಿ ನ. 15ರಂದು ಸಂಜೆ 4ಕ್ಕೆ ತುಪ್ಪದ ದೀಪ ಬೆಳಗಿಸುವ ಮೂಲಕ ಮಂಡಲ ಜ್ಯೋತಿ ಋತುವಿಗೆ ಚಾಲನೆ ನೀಡುವರು. ನ.16ರಂದು ಬೆಳಗ್ಗೆ 3ಕ್ಕೆ ನಿಯುಕ್ತ ಪ್ರಧಾನ ಅರ್ಚಕ ಎಸ್.ಅರುಣ್ ಕುಮಾರ್ ನಂಬೂದಿರಿ ನೂತನ ಮುಖ್ಯ ಅರ್ಚಕ ಸ್ಥಾನವನ್ನು ವಿದ್ಯುಕ್ತವಾಗಿ ವಹಿಸಿಕೊಳ್ಳುವರು. ಮಂಡಲ ಉತ್ಸವ ಕಾಲಾವಧಿಯಲ್ಲಿ ಈ ಹಿಂದಿನಂತೆ 18ತಾಸುಗಳ ದರ್ಶನ ಸಮಯ ನಿಗದಿಪಡಿಸಲಾಗಿದೆ. ಬೆಳಗ್ಗೆ 3ರಿಂದ ಮಧ್ಯಹ್ನ 1, ಅಪರಾಹ್ನ 3ರಿಂದ ರಾತ್ರಿ 11ರ ವರೆಗೆ ದರ್ಶನಸೌಕರ್ಯ ಕಲ್ಪಿಸಲಾಗಿದೆ.
ಡಿಜಿಪಿ ಭೇಟಿ:
ಶಬರಿಮಲೆ ಮಂಡಲ-ಮಕರ ಜ್ಯೋತಿ ಉತ್ಸವ ಆರಂಭದ ಹಿನ್ನೆಲೆಯಲ್ಲಿ ಸಿದ್ಧತಾ ಕಾರ್ಯಗಳ ಬಗ್ಗೆ ಅವಲೋಕನ ನಡೆಸುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ. ಶೇಖ್ ದರ್ವೇಶ್ ಸಾಹಿಬ್ ಗುರುವಾರ ಪಂಪಾಕ್ಕೆ ಭೇಟಿ ನೀಡಿದರು. ಪಂಪಾ ಶ್ರೀರಾಮಸಾಕೇತಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಂಪಾ, ಸನ್ನಿಧಾನಂ ಮತ್ತು ನಿಲಕ್ಕಲ್‍ನಲ್ಲಿ ಮೊದಲ ಹಂತದಲ್ಲಿ ನಿಯೋಜನೆಗೊಂಡಿರುವ ಪೆÇಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಶಬರಿಮಲೆಯಲ್ಲಿ ಸನ್ನದ್ದ ಕಾರ್ಯಗಳ ಬಗ್ಗೆ ಡಿಜಿಪಿ ಡಾ. ಶೇಖ್ ದರ್ವೇಶ್ ಸಾಹಿಬ್ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.