ನವದೆಹಲಿ: ಜನವರಿ ತಿಂಗಳಿನಿಂದ ಅನ್ವಯವಾಗುವಂತೆ ಪ್ರವೇಶ ಪರೀಕ್ಷೆಗಳ ಪ್ರಕ್ರಿಯೆಯಲ್ಲಿ ಹಲವು ಸುಧಾರಣೆ ಕ್ರಮಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
'ವಿವಿಧ ಪ್ರವೇಶ ಪರೀಕ್ಷೆಗಳನ್ನು ದೋಷ ಮುಕ್ತವಾಗಿಸಲು ಅಗತ್ಯ ಸಹಕಾರ ನೀಡಬೇಕು' ಎಂದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮಂಗಳವಾರ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದರು.
'ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಲ್ಲಿ (ಎನ್‌ಟಿಎ) ಜಾರಿಗೊಳಿಸಬೇಕಾದ ವಿವಿಧ ಸುಧಾರಣೆ ಕುರಿತು ರಾಧಾಕೃಷ್ಣನ್ ಸಮಿತಿ ಶಿಫಾರಸು ಮಾಡಿದೆ. ಇದಕ್ಕೆ ರಾಜ್ಯಗಳ ಸಹಕಾರ ಅಗತ್ಯವಾಗಿದೆ' ಎಂದು ಹೇಳಿದರು.
ವಿವಿಧ ರಾಜ್ಯಗಳ ಕಾರ್ಯದರ್ಶಿಗಳು ಪಾಲ್ಗೊಂಡಿದ್ದ, ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಕುರಿತ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರ ಜೊತೆಗೆ ಮಾತನಾಡಿದರು.
'ಪರೀಕ್ಷೆಗಳನ್ನು, ಮುಖ್ಯವಾಗಿ ಪ್ರವೇಶ ಪರೀಕ್ಷೆಗಳನ್ನು ದೋಷಮುಕ್ತಗೊಳಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಣೆಗಾರಿಕೆಯಾಗಿದೆ. ವಿದ್ಯಾರ್ಥಿ ಸಮುದಾಯದಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲು ನಾವು ಒಂದು ತಂಡವಾಗಿ ಕಾರ್ಯನಿರ್ವಹಿಸಲಿದ್ದೇವೆ' ಎಂದು ಅವರು ಹೇಳಿದರು.
ನೀಟ್, ಪಿಎಚ್.ಡಿ ಪ್ರವೇಶ ಪರೀಕ್ಷೆ, ಎನ್‌ಇಟಿ ಪರೀಕ್ಷೆಗಳಲ್ಲಿನ ಅವ್ಯವಸ್ಥೆಯು ತೀವ್ರ ಟೀಕೆಗೆ ಒಳಗಾಗಿತ್ತು. ಹೀಗಾಗಿ ಸುಧಾರಣಾ ಕ್ರಮಗಳ ಬಗ್ಗೆ ಅಗತ್ಯ ಸಲಹೆ ನೀಡಲು ಕೇಂದ್ರ ಸರ್ಕಾರ ಜೂನ್ ತಿಂಗಳಲ್ಲಿ ಇಸ್ರೊದ ಮಾಜಿ ಮುಖ್ಯಸ್ಥ ಕೆ.ರಾಧಾಕೃಷ್ಣನ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು.
ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಹಲವು ಅವ್ಯವಸ್ಥೆಗಳಿಂದಾಗಿ ನೀಟ್ ಟೀಕೆಗೆ ಗುರಿಯಾಗಿದ್ದರೆ, ಪರೀಕ್ಷೆಯ ವಿಶ್ವಾಸಾರ್ಹತೆ ಕುರಿತ ಮಾಹಿತಿ ಆಧರಿಸಿ ಕೇಂದ್ರ ಸರ್ಕಾರವೇ ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಪಡಿಸಿತ್ತು. ಈ ಎರಡರ ಬಗ್ಗೆ ಸಿಬಿಐ ತನಿಖೆ ನಡೆಯುತ್ತಿದೆ.
ಇದರ ಹೊರತಾಗಿ ಮುಂಜಾಗ್ರತೆ ಕ್ರಮವಾಗಿ ಸಿಎಸ್‌ಐಆರ್-ಯುಜಿಸಿ ನೆಟ್ ಮತ್ತು ನೀಟ್ -ಪಿ.ಜಿ ಪರೀಕ್ಷೆಗಳನ್ನು ಕೊನೆಯ ಕ್ಷಣದಲ್ಲಿ ಸರ್ಕಾರವೇ ರದ್ದುಪಡಿಸಿತ್ತು.
ರಾಧಾಕೃಷ್ಣನ್ ಸಮಿತಿಯಲ್ಲಿ ಕುಲಪತಿಗಳು ಸೇರಿದಂತೆ ಶಿಕ್ಷಣ ಕ್ಷೇತ್ರದ ಹಲವು ತಜ್ಞರು, ಶಿಕ್ಷಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಗೋವಿಂದ ಜೈಸ್ವಾಲ್ ಇದ್ದಾರೆ.
ಹಂತ ಹಂತವಾಗಿ ಆನ್‌ಲೈನ್ ಪರೀಕ್ಷೆಗೆ ಆದ್ಯತೆ ನೀಡುವುದು, ಡಿಜಿಟಲ್ ಸ್ವರೂಪದಲ್ಲಿ ಪ್ರಶ್ನೆಪತ್ರಿಕೆ ರವಾನೆಯ ಹೈಬ್ರಿಡ್ ಮಾದರಿ ಅಳವಡಿಕೆ, ವಿದ್ಯಾರ್ಥಿಗಳ ಮೇಲಿನ ಒತ್ತಡ ಕುಗ್ಗಿಸುವುದು, ಮೌಲ್ಯಮಾಪನ ಕ್ರಮದಲ್ಲಿ ಸುಧಾರಣೆ ಸೇರಿ ಹಲವು ಕ್ರಮಗಳನ್ನು ಸಮಿತಿಯು ಉಲ್ಲೇಖಿಸಿದೆ.
ಧರ್ಮೇಂದ್ರ ಪ್ರಧಾನ್ ಕೇಂದ್ರ ಶಿಕ್ಷಣ ಸಚಿವಪ್ರವೇಶ ಪರೀಕ್ಷೆಗಳ ಹೊಸ ಸರಣಿಯು ಜನವರಿಯಿಂದ ಆರಂಭವಾಗಲಿವೆ. ಕಳೆದ ವರ್ಷದ ಅನುಭವಗಳ ಆಧಾರದಲ್ಲಿ ಸರ್ಕಾರ ಹಲವು ಹೊಸ ಕ್ರಮಗಳನ್ನು ಜಾರಿಗೊಳಿಸಲಿದೆ.