HEALTH TIPS

ತಿರುವನಂತಪುರ: ಆತಂಕ ಹುಟ್ಟಿಸಿದ ಐಟಿ ಉದ್ಯೋಗಿಗಳ ಸಾವು

         ತಿರುವನಂತಪುರ: ಕೆಲಸದ ಒತ್ತಡದಿಂದ ಅರ್ನ್‌ಸ್ಟ್‌ ಆಯಂಡ್‌ ಯಂಗ್‌ ಸಂಸ್ಥೆಯ ಮಹಿಳಾ ಉದ್ಯೋಗಿ ಅನ್ನಾ ಸೆಬಾಸ್ಟಿಯನ್‌ ಪೆರಾಯಿಲ್‌ ಸಾವಿನ ಬೆನ್ನಲ್ಲೇ ಹೃದಯ ಸ್ತಂಭನದಿಂದ ಹಲವು ಐಟಿ ಉದ್ಯೋಗಿಗಳು ಮೃತಪಟ್ಟಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

        40 ವರ್ಷದ ವಿ.ಎಸ್‌ ರಾಹುಲ್‌, 41 ವರ್ಷದ ಕನಿವಳನ್‌ ರಮೇಶ್‌, 30ರ ಜೀನಾ ಬಿ, 40ರ ದಿವ್ಯಾ ಸುಂದರಂ, 49ರ ಜಯನ್‌...

           ಹೀಗೆ 30ರಿಂದ 40ರ ಆಸುಪಾಸಿನ ವಯಸ್ಸಿನವರು ಸಾವಿಗೀಡಾದ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

            ಹೀಗೆ ಮೃತಪಟ್ಟವರಿಗೆ 'ಪ್ರತಿಧ್ವನಿ' ಎಂಬ ಕೇರಳದ ಐಟಿ ಉದ್ಯೋಗಿಗಳ ವೇದಿಕೆ ಶ್ರದ್ಧಾಂಜಲಿ ಸಲ್ಲಿಸುತ್ತಲೇ ಇದೆ. ಈ ಪಟ್ಟಿ ಇತರೆ ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ಮಲಯಾಳಿ ಐಟಿ ಉದ್ಯೋಗಿಗಳು ಹಾಗೂ ಕೇರಳದಲ್ಲಿ ಕೆಲಸ ಮಾಡುತ್ತಿರುವ ಇತರೆ ರಾಜ್ಯಗಳ ಐಟಿ ಉದ್ಯೋಗಿಗಳನ್ನು ಒಳಗೊಂಡಿದೆ.

            ಈ ಅಂಶ ನಿಜಕ್ಕೂ ಐಟಿ ವಲಯದ ಗಂಭೀರ ಸಮಸ್ಯೆಯಾಗಿದೆ. ಹೀಗಾಗಿ 'ಪ್ರತಿಧ್ವನಿ'ಯು ಇತ್ತೀಚೆಗೆ ಐಟಿ ಉದ್ಯೋಗಿಗಳ ಆರೋಗ್ಯ ಸರಿಯಾಗಿರುವಂತೆ ಕ್ರಮ ಕೈಗೊಳ್ಳಬೇಕೆಂದು ಕೇರಳ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

           ಈ ಬಗ್ಗೆ ಮಾತನಾಡಿರುವ 'ಪ್ರತಿಧ್ವನಿ'ಯ ರಾಜ್ಯ ಸಂಚಾಲಕ ರಾಜೀವ್‌ ಕೃಷನ್‌, '2023ರಿಂದ ಮಧ್ಯ ವಯಸ್ಸಿನ 12 ಮಂದಿ ಐಟಿ ಉದ್ಯೋಗಿಗಳು ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗಿರಲೂಬಹುದು' ಎಂದು ತಿಳಿಸಿದ್ದಾರೆ.

            ಅನ್ನಾ ಅವರ ಸಾವಿನ ಬಳಿಕ 'ಪ್ರತಿಧ್ವನಿ'ಯು ತಿರುವನಂತಪುರದ ಟೆಕ್ನೋಪಾರ್ಕ್‌ನಲ್ಲಿ ಐಟಿ ವಲಯದ ಉದ್ಯೋಗಿಗಳ ಮಾನಸಿಕ ಆರೋಗ್ಯ, ಕಾರ್ಮಿಕ ಕಾನೂನುಗಳ ಕುರಿತು ವಿಚಾರಸಂಕಿರಣ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಸಾಕಷ್ಟು ಮಂದಿ ಪಾಲ್ಗೊಂಡಿದ್ದರು. ವಿಶೇಷವಾಗಿ, ಮಹಿಳೆಯರು ಉದ್ಯೋಗ- ನಿತ್ಯಜೀವನದ ಸಮತೋಲನ ಕಾಪಾಡುವಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಹಂಚಿಕೊಂಡರು.

            'ವರ್ಕ್‌ ಫ್ರಮ್‌ ಹೋಮ್‌ ಎಂಬುದು ಈಗ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತಿದೆ. ಇಲ್ಲಿ ಸಹೋದ್ಯೋಗಿಗಳು ಹಾಗೂ ಕಂಪನಿಗಳೊಂದಿಗೆ ಸೀಮಿತ ಸಂಪರ್ಕವಿರುತ್ತದೆ. ಆದರೂ ಕಂಪನಿಯು ಉದ್ಯೋಗಿಗಳನ್ನು ದಿನದ 24 ತಾಸುಗಳೂ ಕೆಲಸಕ್ಕೆ ಲಭ್ಯವಾಗುವ ನಿರೀಕ್ಷೆ ಹೊಂದಿರುತ್ತದೆ' ಎಂದು ರಾಜೀವ್‌ ತಿಳಿಸಿದ್ದಾರೆ.

           'ಪ್ರತಿಧ್ವನಿ'ಯು ಐಟಿ ಉದ್ಯೋಗಿಗಳ ಪ್ರತಿಕ್ರಿಯೆ ಆಧರಿಸಿ ಕೇಂದ್ರ ಹಾಗೂ ಕೇರಳ ಸರ್ಕಾರಗಳಿಗೆ ಕಳೆದ ವಾರ ಮನವಿ ಸಲ್ಲಿಸಿದೆ. ಕುಂದುಕೊರತೆ ನಿವಾರಣೆಗೆ ಗೋಪ್ಯ ಕಾರ್ಯವಿಧಾನ, ಐಟಿ ಉದ್ಯೋಗಿಗಳಿಗೆ ಮಾನಸಿಕ ಆರೋಗ್ಯ ಸಹಾಯವಾಣಿ, ಮಾನಸಿಕ ಆರೋಗ್ಯ ರಕ್ಷಣಾ ಕಾಯ್ದೆಯು ಪಾಲನೆಯಾಗುವಂತೆ ಕ್ರಮವಹಿಸಬೇಕು ಎನ್ನುವುದೂ ಸೇರಿ ಹಲವು ಸಲಹೆಗಳನ್ನು ಮನವಿಯಲ್ಲಿ ತಿಳಿಸಲಾಗಿದೆ.

            ಉದ್ಯೋಗಿಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಕೆಲಸದ ಒತ್ತಡದ ಕುರಿತು ಅಧ್ಯಯನ ಮಾಡಲು ಹಾಗೂ ಆ ಬಗ್ಗೆ ನಿಗಾ ವಹಿಸಲು ವೈದ್ಯಕೀಯ ಶಿಬಿರಗಳು ಮತ್ತು ಆರೋಗ್ಯ ಸಮೀಕ್ಷೆಗಳನ್ನು 'ಪ್ರತಿಧ್ವನಿ'ಯು ಪ್ರಾರಂಭಿಸುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries