ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಪ್ರಮುಖ ಹುದ್ದೆಗಳನ್ನು ನೇರ ನೇಮಕಾತಿ (ಲ್ಯಾಟರಲ್ ಎಂಟ್ರಿ) ಮೂಲಕ ಭರ್ತಿ ಮಾಡುವ ವಿಷಯವು ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಳಪಡಲಿದೆ.
ಕಳೆದ ಆಗಸ್ಟ್‌ನಲ್ಲಿ 10 ಜಂಟಿ ಕಾರ್ಯದರ್ಶಿ, 35 ನಿರ್ದೇಶಕ ಮತ್ತು ಉಪ ಕಾರ್ಯದರ್ಶಿ ಹುದ್ದೆಗಳನ್ನು ಲ್ಯಾಟರಲ್ ಎಂಟ್ರಿ ಮೂಲಕ ಭರ್ತಿ ಮಾಡಲು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಜಾಹೀರಾತು ಪ್ರಕಟಿಸಿತ್ತು.
ಅದಕ್ಕೆ ಎನ್‌ಡಿಎ ಮೈತ್ರಿಕೂಟದ ಕೆಲ ಮಿತ್ರ ಪಕ್ಷಗಳು ಹಾಗೂ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ನಾಗರಿಕ ಸೇವಾ ಅಧಿಕಾರಿಗಳು ಸಾಮಾನ್ಯವಾಗಿ ನಾಗರಿಕ ಸೇವಾ ಪರೀಕ್ಷೆಗಳ ಮೂಲಕ ಆಯ್ಕೆಯಾಗಬೇಕು. ಆದರೆ, ವಿವಿಧ ಕ್ಷೇತ್ರಗಳಲ್ಲಿ ಪರಿಣಿತರಾದವರನ್ನು ನೇರವಾಗಿ ಈ ಹುದ್ದೆಗಳಿಗೆ ಲ್ಯಾಟರಲ್ ಎಂಟ್ರಿ ಮೂಲಕ ಭರ್ತಿ ಮಾಡಲು ಸರ್ಕಾರ ಮುಂದಾಗಿರುವುದು ಸರಿಯಲ್ಲ. ಅದೂ ಯಾವುದೇ ಮೀಸಲು ನಿಯಮಗಳನ್ನು ಅನ್ವಯಿಸದೇ ಈ ನೇಮಕಾತಿಗಳನ್ನು ಮಾಡುವುದು ಸೂಕ್ತವಲ್ಲ ಎಂದು ವಿರೋಧ ವ್ಯಕ್ತವಾಗಿತ್ತು.
ಇದು ರಾಜಕೀಯ ವಾಗ್ವಾದಕ್ಕೆ ಕಾರಣವಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಜಾಹೀರಾತನ್ನು ಹಿಂಪಡೆಯುವಂತೆ ಆಯೋಗಕ್ಕೆ ಸೂಚಿಸಿತ್ತು.
ಲಭ್ಯವಿರುವ ಮಾಹಿತಿ ಪ್ರಕಾರ ಇಲ್ಲಿಯವರೆಗೆ 63 ನೇಮಕಾತಿಗಳು ಲ್ಯಾಟರಲ್ ಎಂಟ್ರಿ ಮೂಲಕ ಆಗಿವೆ. ಇದರಲ್ಲಿ 35 ಮಂದಿ ಖಾಸಗಿ ವಲಯದವರು. ಪ್ರಸ್ತುತ 57 ಅಧಿಕಾರಿಗಳು ಸಚಿವಾಲಯ/ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಜ್ಞಾನ ಮತ್ತು ಪರಿಣತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ 2018ರಿಂದಲೂ ಲ್ಯಾಟರಲ್ ಎಂಟ್ರಿ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಸಿದೆ.
ಸಂಸದೀಯ ಸ್ಥಾಯಿ ಸಮಿತಿ ಆಯ್ಕೆ ಮಾಡಿದ ವಿಷಯಗಳ ಪಟ್ಟಿಯಲ್ಲಿ, ನಾಗರಿಕ ಸೇವೆಗಳಲ್ಲಿ ಲ್ಯಾಟರಲ್ ಎಂಟ್ರಿ ವಿಷಯವೂ ಸೇರಿದೆ ಎಂದು ಲೋಕಸಭೆಯ ಕಾರ್ಯಾಲಯ ಮಾಹಿತಿ ನೀಡಿದೆ.