ಕೋಯಿಕ್ಕೋಡ್: ವಯನಾಡು ಭೂಕುಸಿತದ ಸಂತ್ರಸ್ತರ ಕುಟುಂಬಗಳಿಗೆ ನೆರವು ಒದಗಿಸಲು ಕೇರಳ ಸರ್ಕಾರದ ಮೇಲೆ ಕಾಂಗ್ರೆಸ್ ಹಾಗೂ ಯುಡಿಎಫ್ ಒತ್ತಡವನ್ನು ಹೇರಬೇಕು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು (ಶನಿವಾರ) ಆಗ್ರಹಿಸಿದ್ದಾರೆ.
ವಯನಾಡು ಲೋಕಸಭಾ ಉಪಚುನಾವಣೆಯಲ್ಲಿ ಗೆಲುವಿನ ಬಳಿಕ ಮೊದಲ ಬಾರಿಗೆ ಪ್ರಿಯಾಂಕಾ ಗಾಂಧಿ ಅವರೊಂದಿಗೆ ರಾಹುಲ್ ಗಾಂಧಿ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ.
ಬಳಿಕ ಮುಕ್ಕಂನಲ್ಲಿ ಸಹೋದರಿಯೊಂದಿಗೆ ಜಂಟಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಹುಲ್, ಭೂಕುಸಿತದಿಂದ ಮೃತಪಟ್ಟವರಿಗೆ ಶ್ರದ್ಧಾಂಜಲಿ ಅರ್ಪಿಸಿ ಭಾಷಣವನ್ನು ಆರಂಭಿಸಿದರು.
'ದುರದೃಷ್ಟವಶಾತ್, ನಾವು ಅಧಿಕಾರದಲ್ಲಿಲ್ಲ. ಆದ್ದರಿಂದ ಸರ್ಕಾರ ಮಾಡಬೇಕಾದ ಕೆಲಸವನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕಾಂಗ್ರೆಸ್ ಹಾಗೂ ಯುಡಿಎಫ್‌ನ ಪ್ರತಿಯೊಬ್ಬರೂ ಕೇರಳದ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಸಹೋದರಿ ಪ್ರಿಯಾಂಕಾ, ಕೆ.ಸಿ.ವೇಣುಗೋಪಾಲ್ ಅವರಿಗೆ ತಿಳಿಸಿದ್ದೇನೆ' ಎಂದು ತಿಳಿಸಿದರು.
ವಯನಾಡು ಜನರ ಮೇಲೆ ತಾರತಮ್ಯ ಧೋರಣೆ ತೋರಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ವಯನಾಡಿನ ಜನತೆಗೆ ಕೇಂದ್ರದಿಂದ ನೆರವು ದೊರಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
'ಸಂವಿಧಾನವು ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಹೇಳಿದರೂ ಉದ್ಯಮಿ ಗೌತಮ್ ಅದಾನಿ ಅವರನ್ನು ಮಾತ್ರ ಪ್ರಧಾನಿ ಮೋದಿ ಭಿನ್ನವಾಗಿ ನಡೆಸಿಕೊಳ್ಳುತ್ತಾರೆ. ಅಮೆರಿಕದಲ್ಲಿ ಏನೇ ಆದರೂ ಪರವಾಗಿಲ್ಲ. ಭಾರತದಲ್ಲಿ ನಾವು ಆತನ ಮೇಲೆ ದೋಷಾರೋಪಣೆ ಮಾಡುವುದಿಲ್ಲ ಎಂಬ ನಿಲುವನ್ನು ಪ್ರಧಾನಿ ಮೋದಿ ತಳೆದಿದ್ದಾರೆ' ಎಂದು ರಾಹುಲ್ ಆರೋಪಿಸಿದ್ದಾರೆ.
ಇದಕ್ಕೂ ಮೊದಲು ಮಾತನಾಡಿದ ಪ್ರಿಯಾಂಕಾ, 'ಇಲ್ಲಿಗೆ ಬರಲು ಖುಷಿಯಾಗುತ್ತಿದೆ. ವಯನಾಡಿನ ಜನರ ಉತ್ತಮ ಭವಿಷ್ಯಕ್ಕಾಗಿ ನನ್ನಿಂದ ಸಾಧ್ಯವಿರುವ ಎಲ್ಲವನ್ನು ಮಾಡಲು ಸಿದ್ಧನಿದ್ದೇನೆ' ಎಂದು ಭರವಸೆ ನೀಡಿದ್ದಾರೆ.
ಇತ್ತೀಚಿಗೆ ನಡೆದ ವಯನಾಡು ಲೋಕಸಭೆ ಉಪಚುನಾವಣೆಯಲ್ಲಿ ಪ್ರಿಯಾಂಕಾ 4,10,931 ಮತಗಳ ಅಂತರದಿಂದ ಜಯ ಗಳಿಸಿದ್ದರು.