ಕಾಸರಗೋಡು: ಎಲ್ಲಿಯ ಲಂಡನ್....ಎಲ್ಲಿಯ ಕಾಸರಗೋಡು. ಆದರೆ ಇಂದು ಕಾಸರಗೋಡಿನ ಸಂಬಂಧ ಲಂಡನ್‍ನೊಂದಿಗೆ ಬೆಸೆದುಕೊಂಡಿದೆ. ಸೂರ್ಯ ಮುಳುಗದ ಸಾಮ್ರಾಜ್ಯ ಲಂಡನ್‍ನ ಚಾಲ್ರ್ಸ್ ದೊರೆಯ ಅಸಿಸ್ಟೆಂಟ್ ಪ್ರೈವೇಟ್ ಸೆಕ್ರೆಟರಿಯಾಗಿ ಕಾಸರಗೋಡು ಮೂಲದ ವನಿತೆ ನಿಯುಕ್ತಿಗೊಳ್ಳುವ ಮೂಲಕ ಕೇರಳದ ಪುಟ್ಟ ಜಿಲ್ಲೆ ಕಾಸರಗೋಡು ವಿಶ್ವದ ಗಮನ ಸೆಳೆಯುತ್ತಿದೆ!
ಪ್ರಸಕ್ತ ಲಂಡನ್ ನಲ್ಲಿ ಚಾಲ್ರ್ಸ್ ದೊರೆಯ ಅಸಿಸ್ಟೆಂಟ್ ಪ್ರೈವೇಟ್ ಸೆಕ್ರೇಟರಿ ಆಗಿರುವವರು ಕಾಸರಗೋಡಿನ ಮುನಾ ಶಂಸುದ್ದೀನ್. ಕಾಸರಗೋಡು ತಳಂಗರೆ ತೆರುವತ್ ಹಾಷಿಂ ಸ್ಟ್ರೀಟಿನ ಪುದಿಯಪುರಯಿಲ್ ನಿವಾಸಿ ದಿ. ಡಾ. ಶಂಸುದ್ದೀನ್-ಸೈದುನ್ನೀಸಾ ದಂಪತಿಯ ಪುತ್ರಿಯಾದ ಮುನಾ ಶಂಸುದ್ದೀನ್ ಲಂಡನ್ ನಲ್ಲಿ ಓದಿ ಬೆಳೆದವರು. ಬ್ರಿಟೀಷ್ ಕಾನೂನು ಸಲಹಾಲಯದಲ್ಲಿ ಉದ್ಯೋಗ ಆರಂಭಿಸಿ ಲಂಡನ್ ವಿದೇಶಾಂಗ ಕಾಮನ್ವೆಲ್ತ್ ಡೆವಲಪ್‍ಮೆಂಟ್ ವಿಭಾಗದಲ್ಲಿ ಉದ್ಯೋಗದಲ್ಲಿದ್ದಾಗ ಬ್ರಿಟನ್ ದೊರೆಯ ಪ್ರಧಾನ ಅಸಿಸ್ಟೆಂಟ್ ಸೆಕ್ರೆಟರಿಯಾಗುವ ಅವಕಾಶ ಇವರಿಗೆ ಲಭಿಸಿತ್ತು.
ಬ್ರಿಟನ್ ನಾಟಿಂಗ್‍ಹಾಂ ವಿಶ್ವವಿದ್ಯಾಲಯದಿಂದ ಮೇಥಮೆಟಿಕ್ಸ್ ಇಂಜಿನಿಯರಿಂಗ್‍ನಲ್ಲಿ ಪಧವೀಧರೆಯಾದ ಬಳಿಕ ಇವರು ಬ್ರಿಟೀಷ್ ವಿದೇಶಾಂಗ ಸೇವೆಗೆ ಸೇರಿದ್ದರು. ಜೆರುಸಲೇಂನಲ್ಲಿ ಬ್ರಿಟನ್ ಕನ್ಸಲ್ಟೇಟಿವ್ ಜನರಲ್, ಪಾಕಿಸ್ತಾನದ ಕರಾಚಿಯಲ್ಲಿ ಬ್ರಿಟನ್ ವಿದೇಶಾಂಗದ ಮುಖ್ಯಸ್ಥೆಯಾಗಿಯೂ ದುಡಿದಿರುವ ಇವರು ಪ್ರಸಕ್ತ ಬ್ರಿಟನ್‍ನ ಚಾಲ್ರ್ಸ್ ದೊರೆಯ ಎಲ್ಲಾ ಔದ್ಯೋಗಿಕ ಕಾರ್ಯಕ್ರಮಗಳನ್ನು ನಿರ್ವಹಿಸುವ ಪ್ರಮುಖರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಪತಿ ಡೇವಿಡ್ ಯು.ಎನ್ ಉದ್ಯೋಗಿ. ಎಳವೆಯಲ್ಲಿ ಕಾಸರಗೋಡಿನ ತನ್ನ ತಂದೆ-ತಾಯಿಯ ಊರಿಗೆ ಆಗಮಿಸುತ್ತಿದ್ದ ಮುನಾ, 10ವರ್ಷಗಳ ಹಿಂದೆಯಷ್ಟೆ ಕಾಸರಗೋಡಿಗೆ ಆಗಮಿಸಿ ವಾಪಸಾಗಿದ್ದರು, ಎಂಬುದಾಗಿ ಮುನಾ ಅವರ ಸನಿಹದ ಸಂಬಂಧಿಕರು ತಿಳಿಸುತ್ತಾರೆ.